ತಿರುವನಂತಪುರ: ರಷ್ಯಾ- ಉಕ್ರೇನ್ ನಡುವಿನ ಯುದ್ಧದಲ್ಲಿ ಉಂಟಾದ ಗಂಭೀರ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಮಲಯಾಳಿ ಯುವಕನೊಬ್ಬ, 'ಮತ್ತೆ ನನ್ನನ್ನು ಯುದ್ಧ ವಲಯಕ್ಕೆ ಕಳುಹಿಸುವ ಸಾಧ್ಯತೆಯಿದೆ. ಹೀಗಾಗಿ ಭಾರತಕ್ಕೆ ವಾಪಸ್ ಕರೆಸಿಕೊಳ್ಳಲು ನೆರವು ನೀಡಿ' ಎಂದು ಮನವಿ ಮಾಡಿದ್ದಾರೆ.
ತ್ರಿಶ್ಶೂರ್ ಮೂಲದ 27 ವರ್ಷದ ಜೈನ್ ಕುರಿಯನ್ ಅವರು ಈ ಸಂಬಂಧ ಎಸ್‌ಒಎಸ್ ಸಂದೇಶ ಕಳುಹಿಸಿದ್ದು, ನೆರವಿಗೆ ಬರುವಂತೆ ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.
'ರಷ್ಯಾದ ಸೇನೆಯು ಬಲವಂತವಾಗಿ ನನ್ನನ್ನು ಪುನಃ ಯುದ್ಧ ವಲಯಕ್ಕೆ ಕಳುಹಿಸುವ ಸಾಧ್ಯತೆಯಿದೆ. ಅದರಿಂದ ನನ್ನ ಜೀವಕ್ಕೆ ಅಪಾಯ ಎದುರಾಗುವ ಆತಂಕವಿದೆ' ಎಂದು ಅವರು ತಿಳಿಸಿದ್ದಾರೆ.
'ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ನನ್ನನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಿ ತರಲು ತಕ್ಷಣವೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಿ' ಎಂದು ಅವರು ಮನವಿ ಮಾಡಿದ್ದಾರೆ.
ಕುರಿಯನ್ ಅವರನ್ನು ಸುರಕ್ಷಿತವಾಗಿ ದೇಶಕ್ಕೆ ವಾಪಸ್ ಕರೆತರುವಂತೆ ಅವರ ಪೋಷಕರು ಮತ್ತು ಸಹೋದರರು ಸಹ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ರಷ್ಯಾ- ಉಕ್ರೇನ್ ಯುದ್ಧ ವಲಯದಲ್ಲಿ ತ್ರಿಶ್ಶೂರ್ ಮೂಲದ ಕುರಿಯನ್ ಅವರ ಸಂಬಂಧಿ ಬಿನಿಲ್ ಬಾಬು (32) ಅವರು ಜನವರಿ 4ರಂದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಆದರೆ ನಿರಂತರ ಮನವಿಗಳು ಹೊರತಾಗಿಯೂ ಅವರ ಮೃತದೇಹದ ಹಸ್ತಾಂತರ ಆಗಿಲ್ಲ. ತ್ರಿಶ್ಶೂರ್ ಮೂಲದ ಮತ್ತೊಬ್ಬರಾದ ಸಂದೀಪ್ ಅವರು ಯುದ್ಧ ವಲಯದಲ್ಲಿ ಮೃತಪಟ್ಟಿದ್ದರು. ಅವರ ದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.
ಬಿನಿಲ್ ಹಾಗೂ ಜೈನ್ ಕುರಿಯನ್ ಅವರಿಗೆ ಏಜೆಂಟರು ವಂಚಿಸಿದ್ದರು. ಅವರನ್ನು ಅಕ್ರಮವಾಗಿ ಸೇನೆಗೆ ಸೇರಿಸಲಾಗಿತ್ತು. ಯಾವುದೇ ತರಬೇತಿಯಿಲ್ಲದೆ ಅವರಿಬ್ಬರೂ ಕಳೆದ ವರ್ಷದ ಜೂನ್‌ನಿಂದ ರಷ್ಯಾ ಸೇನೆಯಲ್ಲಿ, ಯುದ್ಧಭೂಮಿಯಲ್ಲಿ ಕೆಲಸ ಮಾಡುತ್ತಿದ್ದರು.




