ಕೋಲ್ಕತ್ತ: 25 ಸಾವಿರಕ್ಕೂ ಹೆಚ್ಚು ಶಿಕ್ಷಕರು ಮತ್ತು ಬೋಧಕೇತರರ ನೇಮಕಾತಿ ಅಸಿಂಧುಗೊಳಿಸಿರುವುದನ್ನು ಪುನರ್ ಪರಿಶೀಲಿಸುವಂತೆ ಕೋರಿ ಪಶ್ಚಿಮ ಬಂಗಾಳದ ಪ್ರೌಢ ಶಿಕ್ಷಣ ಮಂಡಳಿಯು (ಡಬ್ಲ್ಯುಬಿಬಿಎಸ್‌ಇ) ಸೋಮವಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.
ಶೈಕ್ಷಣಿಕ ವರ್ಷ ಮುಕ್ತಾಯವಾಗುವವರೆಗೆ ಅಥವಾ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹೊಸದಾಗಿ ನೇಮಕಾತಿ ಆಗುವವರೆಗೆ, ಈಗಾಗಲೇ ನೇಮಕಗೊಂಡ ಅರ್ಹ ಶಿಕ್ಷಕರಿಗೆ ಕರ್ತವ್ಯ ನಿರ್ವಹಿಸಲು ಅವಕಾಶ ನೀಡುವಂತೆ ಮಂಡಳಿ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ ಎಂದು ತಿಳಿಸಿವೆ.
ಮಂಡಳಿ ಅಧ್ಯಕ್ಷ ರಾಮಾನುಜ ಗಂಗೂಲಿ ಅವರು, 'ಈ ಕುರಿತು ನನಗೆ ಏನೂ ಗೊತ್ತಿಲ್ಲ ಅಥವಾ ಈ ಬಗ್ಗೆ ಪ್ರತಿಕ್ರಿಯಿಸಲ್ಲ' ಎಂದಿದ್ದಾರೆ.
ಶಾಲಾ ಸೇವಾ ಆಯೋಗದ (ಎಸ್‌ಎಸ್‌ಸಿ) ಅಧ್ಯಕ್ಷ ಸಿದ್ಧಾರ್ಥ ಮಜುಂದಾರ್ ಮಾತನಾಡಿ, 'ಈ ಸಂಬಂಧ ಕೆಲವು ವಿಚಾರಗಳ ಬಗ್ಗೆ ಸ್ಪಷ್ಟನೆ ಕೋರಿ ಶೀಘ್ರವೇ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಾಗುವುದು' ಎಂದು ತಿಳಿಸಿದ್ದಾರೆ.




