ನವದೆಹಲಿ: ಶೀಘ್ರದಲ್ಲಿ ನಡೆಯಲಿರುವ ಜನಗಣತಿಯೊಂದಿಗೆ ಜಾತಿ ಗಣತಿಯನ್ನೂ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ.
ಜಾತಿ ಸಮೀಕ್ಷೆಯನ್ನು ರಾಜಕೀಯ ಲಾಭಕ್ಕಾಗಿ ವಿರೋಧ ಪಕ್ಷಗಳು ಬಳಸಿಕೊಳ್ಳುತ್ತಿವೆ ಎಂದು ಆರೋಪಿಸುತ್ತಿದ್ದ ಕೇಂದ್ರ ಸರ್ಕಾರ, ಇದೀಗ ಜಾತಿ ಗಣತಿಯನ್ನು ಜನಗಣತಿಯ ಭಾಗವಾಗಿಸುವುದಾಗಿ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
'2010ರಲ್ಲಿ ಕಾಂಗ್ರೆಸ್ ಸರ್ಕಾರವು ಜಾತಿ ಗಣತಿಯನ್ನು ವಿರೋಧಿಸಿತ್ತು. ಸಂಪುಟ ಸಭೆಯಲ್ಲಿ ಜಾತಿ ಗಣತಿ ಕುರಿತು ತೀರ್ಮಾನಿಸಲಾಗುವುದು ಎಂದು ಅಂದಿನ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರು ಹೇಳಿದ್ದರು. ಈ ವಿಷಯ ಕುರಿತು ಅಧ್ಯಯನಕ್ಕೆ ಸಚಿವರ ಸಮಿತಿಯನ್ನು ರಚಿಸಲಾಗಿತ್ತು. ಬಹುತೇಕ ರಾಜಕೀಯ ಪಕ್ಷಗಳು ಜಾತಿ ಗಣತಿ ಪರವಾಗಿದ್ದವು. ಹೀಗಿದ್ದರೂ, ಅಂದಿನ ಕಾಂಗ್ರೆಸ್ ಸರ್ಕಾರವು ಜಾತಿ ಸಮೀಕ್ಷೆ ನಡೆಸಲು ನಿರ್ಧರಿಸಿತ್ತು. ಇವೆಲ್ಲವನ್ನೂ ಗಮನಿಸಿದರೆ ಕಾಂಗ್ರೆಸ್ ಮತ್ತು ಅದರ ಇಂಡಿ ಒಕ್ಕೂಟದ ಸದಸ್ಯ ಪಕ್ಷಗಳು ಜಾತಿ ಗಣತಿಯನ್ನು ಒಂದು ಅಸ್ತ್ರವನ್ನಾಗಿಯೇ ಬಳಸಿಕೊಂಡು ಬರುತ್ತಿದ್ದಾರೆ' ಎಂದು ಅಶ್ವಿನಿ ವೈಷ್ಣವ್ ಆರೋಪಿಸಿದ್ದಾರೆ.
'ಕೆಲ ರಾಜ್ಯಗಳು ಜಾತಿ ಗಣತಿಯನ್ನು ನಡೆಸಿವೆ. ಇನ್ನೂ ಕೆಲ ರಾಜ್ಯಗಳು ಜಾತಿ ಸಮೀಕ್ಷೆ ನಡೆಸಿವೆ. ಇನ್ನೂ ಕೆಲವೆಡೆ ರಾಜಕೀಯ ಉದ್ದೇಶದಿಂದ ಅಪಾರದರ್ಶಕವಾಗಿ ಸಮೀಕ್ಷೆ ಕೈಗೊಳ್ಳಲಾಗಿದೆ. ಇವೆಲ್ಲವೂ ಸಮಾಜದಲ್ಲಿ ಸಂದೇಹ ಮೂಡಿಸುತ್ತವೆ. ಆದರೆ ರಾಜಕೀಯದ ಉದ್ದೇಶದಿಂದ ಸಾಮಾಜಿಕ ಸ್ವಾಸ್ಥ್ಯ ಹಾಳಾಗಬಾರದು. ಇದನ್ನು ಖಾತ್ರಿಪಡಿಸಿಕೊಳ್ಳುವ ಉದ್ದೇಶದಿಂದ ಜನ ಗಣತಿಯಲ್ಲಿ ಜಾತಿ ಗಣತಿಯ ಮಾಹಿತಿಯನ್ನೂ ದಾಖಲಿಸಲಾಗುವುದು' ಎಂದಿದ್ದಾರೆ.




