HEALTH TIPS

ವಾಣೀನಗರ ಹರಿಣಾಕ್ಷಿಯವರ ಮನೆಯ ಕೀಲಿಕೈ ಹಸ್ತಾಂತರ

ಪೆರ್ಲ: ಕೇರಳದಲ್ಲಿ 46 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಮಿಲ್ಮಾ 10.5 ಲಕ್ಷಕ್ಕೂ ಹೆಚ್ಚು ಹೈನುಗಾರರ ಸ್ವಂತ ಉದ್ಯಮ ಸಂಸ್ಥೆಯಾಗಿದೆ. ರಾಜ್ಯದಲ್ಲಿ ಕ್ಷೀರಾಭಿವೃದ್ಧಿಗೆ ಸ್ಥಳೀಯಾಡಳಿತ ಸಂಸ್ಥೆಗಳ ಮೂಲಕ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಎಲ್ಲರೂ ಈ ಸವಲತ್ತುಗಳ ಪ್ರಯೋಜನ ಪಡೆಯಬೇಕು ಎಂದು ಮಿಲ್ಮಾ ಅಧ್ಯಕ್ಷ ಕೆ.ಎಸ್.ಮಣಿ ಹೇಳಿದರು.

ಮಲಬಾರ್ ಮಿಲ್ಮಾ ಸಹಕಾರಿ ಕ್ಷೀರೋತ್ಪಾದಕ ಯೂನಿಯನ್ ಅಂಗ ಸಂಸ್ಥೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕ್ಷೀರ ಕೃಷಿಕರಿಗೆ ಮನೆ ನಿರ್ಮಿಸಿಕೊಡುವ ಮಹತ್ವಪೂರ್ಣ ಯೋಜನೆಯಂತೆ 2024-25ನೇ ಆರ್ಥಿಕ ವರ್ಷದಲ್ಲಿ ಕಾಸರಗೋಡು ಜಿಲ್ಲೆಯಿಂದ ಆಯ್ಕೆಯಾಗಿ ಮನೆ ನಿರ್ಮಾಣ ಪೂರ್ತಿಗೊಳಿಸಿದ ವಾಣಿನಗರದ ಹರಿಣಾಕ್ಷಿಯವರ ಮನೆಯ ಕೀಲಿಕೈ ಹಸ್ತಾಂತರಿಸಿ ಅವರು ಮಾತನಾಡಿದರು.


ಮಿಲ್ಮಾ ಫೆಡರೇಶನ್ ಕಳೆದ ಒಂದು ವರ್ಷದಲ್ಲಿ ಹೈನುಗಾರರಿಗಾಗಿ 49 ಕೋಟಿ ರೂ.ವಿವಿಧ ರೀತಿಯಲ್ಲಿ ವ್ಯಯಿಸಿದೆ. ಪಶು ಆಹಾರ, ಸೈಲೇಜ್, ಜೋಳದ ದಂಟು ಇತ್ಯಾದಿಗೆ 25 ಕೋಟಿ ರೂ. ಸಬ್ಸಿಡಿ ನೀಡಲಾಗಿದೆ. ಪ್ರತಿ ಚೀಲ ಪಶು ಆಹಾರಕ್ಕೆ 250-300 ಸಬ್ಸಿಡಿ ನೀಡಲಾಗುತ್ತಿದೆ. ಮಿಲ್ಮಾ ಕ್ಷೀರ ಗೃಹ ಯೋಜನೆಯಂತೆ ಮಲಬಾರ್ ಪ್ರದೇಶದ ಆರು ಜಿಲ್ಲೆಗಳಿಂದ ಆಯ್ದ ಬಡ ಹೈನುಗಾರರಿಗೆ 36 ಮನೆ ನಿರ್ಮಿಸಿ ಕೊಟ್ಟಿದೆ. ಒಂದು ಮನೆಗೆ ತಲಾ 5 ಲಕ್ಷ ರೂ.ಗಳಂತೆ ಮಿಲ್ಮಾ ನೀಡಿದೆ. ಈ ಆರ್ಥಿಕ ವರ್ಷದಲ್ಲಿ 13 ಕ್ಷೀರ ಕೃಷಿಕರಿಗೆ ಮನೆ ನಿರ್ಮಿಸಿ ಕೊಡಲಾಗಿದ್ದು ಇದರಲ್ಲಿ ಇಬ್ಬರನ್ನು ಕಾಸರಗೋಡು ಜಿಲ್ಲೆಯಿಂದ ಆಯ್ಕೆ ಮಾಡಲಾಗಿದೆ ಎಂದರು.

ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಂಚಾಯಿತಿ ಹೈನುಗಾರರಿಗೆ ವಿವಿಧ ಯೋಜನೆಗಳ ಮೂಲಕ ಸಬ್ಸಿಡಿ ಸಹಿತ ಅನೇಕ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ. ಅನೇಕ ಯೋಜನೆಗಳನ್ನು ಸಿದ್ಧಪಡಿಸುತ್ತಿದೆ. ಹಲವು ಯೋಜನೆಗಳಿಗೆ ಫಲಾನುಭವಿಗಳೇ ಇಲ್ಲದ ಸ್ಥಿತಿಯೂ ಇದೆ. ಹೈನುಗಾರರು ಸವಲತ್ತುಗಳ ಪ್ರಯೋಜನ ಪಡೆದು ಕ್ಶೀರೋದ್ಯಮವನ್ನು ಬೆಳೆಸಿ ಕ್ಷೀರೋತ್ಪಾದಕ ಸಂಘಗಳನ್ನು ಅಭಿವೃದ್ಧಿಪಡಿಸಲು ಶ್ರಮಿಸಬೇಕು ಎಂದರು.

ಕಾಸರಗೋಡು ಕಚೇರಿ ಜಿಲ್ಲಾ ಘಟಕ ಮುಖ್ಯಸ್ಥ ಶಾಜಿ ವಿ. ಮಿಲ್ಮಾದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಮಿಲ್ಮಾ ನಿರ್ದೇಶಕ ಪಿ.ಪಿ.ನಾರಾಯಣನ್ ಶೈಕ್ಷಣಿಕ ಧನ ಸಹಾಯ ವಿತರಿಸಿದರು. ಮಂಜೇಶ್ವರ ಬ್ಲಾಕ್ ಪಂ.ಸದಸ್ಯ ಬಟ್ಟು ಶೆಟ್ಟಿ ಮಿಲ್ಮಾ ಫಾಂ ಸಪೋರ್ಟ್ ಆರ್ಥಿಕ ಸಹಾಯ ವಿತರಿಸಿದರು. ಗ್ರಾಪಂ ಸದಸ್ಯರಾದ ರಾಮಚಂದ್ರ ಎಂ., ನರಸಿಂಹ ಪೂಜಾರಿ ಎಸ್.ಬಿ., ಮಂಜೇಶ್ವರ ಬ್ಲಾಕ್ ಡಿ.ಇ.ಒ.ಅಜಯನ್ ಎಸ್., ಪೆರ್ಲ ಕ್ಷೀರೋತ್ಪಾದಕ ಸಂಘದ ಕಾರ್ಯದರ್ಶಿ ಚೇತನ ಕೆ. ಶುಭ ಹಾರೈಸಿದರು. 

ಎಣ್ಮಕಜೆ ಗ್ರಾಪಂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್. ಗಾಂಭೀರ್, ಪಡ್ರೆ ಕ್ಷೀರೋತ್ಪಾದಕ ಸಂಘದ ನಿರ್ದೇಶಕ ಗೋವಿಂದ ಭಟ್ ಉಪಸ್ಥಿತರಿದ್ದರು. ಪಡ್ರೆ ಕ್ಷೀರೋತ್ಪಾದಕ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ ಸ್ವಾಗತಿಸಿ, ಎಂ.ಎಂ.ಪಿ. ಒ.ಷಲ್ನ ಅರಯಾಕಂಡಿ ವಂದಿಸಿದರು. ಸುಧೀರ್ ರೈ ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries