ಮಂಜೇಶ್ವರ: ಎರಡನೇ ಪಿಣರಾಯಿ ವಿಜಯನ್ ಸರ್ಕಾರದ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ ಏಪ್ರಿಲ್ 21 ರಿಂದ 27 ರವರೆಗೆ ಕಾಲಿಕಡವು ಮೈದಾನದಲ್ಲಿ ಆಯೋಜಿಸಲಾಗುವ ವ್ಯಾಪಾರ ಮೇಳದ ಅಂಗವಾಗಿ ಮಂಜೇಶ್ವರ ಗೋವಿಂದ ಪೈ ಕಾಲೇಜು ಎನ್.ಎಸ್.ಎಸ್. ಘಟಕದ ಸಹಯೋಗದೊಂದಿಗೆ ಕಾಲೇಜಿನಲ್ಲಿ ಇತ್ತೀಚೆಗೆ ಕಾಸರಗೋಡಿನ ತುಳು ಸಂಸ್ಕøತಿಯ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಸಮಾರಂಭವನ್ನು ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್. ಜಯಾನಂದ ಉದ್ಘಾಟಿಸಿ ಮಾತನಾಡಿ, ತುಳು ಗ್ರಾಮೀಣ ಹಳ್ಳಿಗಳ ಅಡಿಪಾಯವೇ ಕೃಷಿ ಸಂಸ್ಕೃತಿ ಎಂದು ಅವರು ಹೇಳಿದರು. ತುಳುನಾಡಿನಲ್ಲಿ ತಾಳೆಯೋಲೆಗಳು ಪ್ರಾಚೀನರ ಓದು-ಬರಹದ ಬಗೆಗಿನ ಆಸಕ್ತಿಯನ್ನು ಬಿಂಬಿಸುತ್ತದೆ. ನಾಗಾರಾಧನೆ, ಭೂತಾರಾಧನೆ ಮತ್ತು ಕಂಬಳಗಳು ಈ ನಾಡಿನ ಸಂಸ್ಕೃತಿಯ ಭಾಗವಾಗಿದೆ ಎಂದು ಅವರು ಹೇಳಿದರು.
ನಮ್ಮದು ಹಲವು ಭಾಷೆಗಳನ್ನು ಮಾತನಾಡುವ ಜನರ ನಾಡು. ಭಾಷೆಗಳ ನಡುವೆ ಉತ್ತಮ ಸಹೋದರತ್ವವನ್ನು ಕಾಪಾಡಿಕೊಳ್ಳಲು ನಾವು ಒಗ್ಗಟ್ಟಿನಿಂದ ಮುಂದುವರಿಯಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಜನರ ಸಹಭಾಗಿತ್ವ ಮಹತ್ತರವಾದುದು ಎಂದು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಹಿರಿಯ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
ಗೋವಿಂದಪೈ ಸ್ಮಾರಕ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ. ಮುಹಮ್ಮದ್ ಅಲಿ ಕೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಅಧೀಕ್ಷಕ ಕೆ.ಎಸ್. ದಿನೇಶ ಮಾತನಾಡಿದರು. ಜಿಲ್ಲಾ ಮಾಹಿತಿ ಕಚೇರಿಯ ಸಹಾಯಕ ಸಂಪಾದಕಿ ಎ.ಪಿ. ದಿಲ್ನಾ ಸ್ವಾಗತಿಸಿ, ಎನ್.ಎಸ್.ಎಸ್. ಘಟಕ ಕಾರ್ಯದರ್ಶಿ ಕೆ. ಅಮೃತಾ ವಂದಿಸಿದರು.

.jpg)
