ನವದೆಹಲಿ: ಸಂಬಂಧಗಳು ಹಳಸಿದಾಗ ಕ್ರಿಮಿನಲ್ ಪ್ರಕರಣ ದಾಖಲು ಮಾಡುವ ಪ್ರವೃತ್ತಿಯು ಹೆಚ್ಚಾಗುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ಕಳವಳ ವ್ಯಕ್ತಪಡಿಸಿದೆ.
ಸಮ್ಮತಿಯ ಸಂಬಂಧವೊಂದರಲ್ಲಿ ಮದುವೆಯ ಸಾಧ್ಯತೆ ಇದ್ದಿತ್ತು ಎಂದಾದರೆ, ಸಂಬಂಧ ಮರಿದುಬಿದ್ದ ನಂತರದಲ್ಲಿ ಅಲ್ಲಿ ಇದ್ದಿದ್ದು ಮದುವೆಯ ಸುಳ್ಳು ಭರವಸೆ ಎಂಬ ಬಣ್ಣ ನೀಡಲು ಆಗುವುದಿಲ್ಲ ಎಂದು ಕೋರ್ಟ್ ಹೇಳಿದೆ.
ಮಹಿಳೆಯೊಬ್ಬರನ್ನು 2014ರಲ್ಲಿ ದುರ್ಬಳಕೆ ಮಾಡಿಕೊಂಡ ಆರೋಪ ಎದುರಿಸುತ್ತಿದ್ದ ನ್ಯಾಯಾಂಗ ಅಧಿಕಾರಿಯಾಗಿದ್ದ ಬಿಸ್ವಜ್ಯೋತಿ ಚಟರ್ಜಿ ಅವರ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆಗಳನ್ನು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಎಸ್.ಸಿ. ಶರ್ಮಾ ಅವರು ಇದ್ದ ವಿಭಾಗೀಯ ಪೀಠವು ರದ್ದುಪಡಿಸಿದೆ.
ಚಟರ್ಜಿ ಹಾಗೂ ದೂರುದಾರ ಮಹಿಳೆಯ ನಡುವೆ ಇದ್ದಿದ್ದು ಸಮ್ಮತಿಯ ಸಂಬಂಧವಾಗಿತ್ತು ಎಂದು ಪೀಠವು ಹೇಳಿದೆ.
ತಾನು ಪತ್ನಿಯಿಂದ ಬೇರೆಯಾಗಿರುವುದಾಗಿ ಚಟರ್ಜಿ ತನಗೆ ತಿಳಿಸಿದ್ದರು ಎಂಬುದನ್ನು ಮಹಿಳೆಯೇ ಹೇಳಿದ್ದಾರೆ. ಚಟರ್ಜಿ ಅವರ ವೈಯಕ್ತಿಕ ಹಾಗೂ ವೃತ್ತಿಸಂಬಂಧಿ ವಿವರಗಳ ಅರಿವು ಇದ್ದ ಮಹಿಳೆಯು ಅವರಿಂದ ಹಣಕಾಸಿನ ನೆರವು ಪಡೆಯುತ್ತಿದ್ದರು. ಚಟರ್ಜಿ ಅವರೊಂದಿಗೆ ಸಂಬಂಧ ಬೆಳೆಸುವ ಮುನ್ನ ಮಹಿಳೆಯು ಸಾಕಷ್ಟು ಆಲೋಚನೆ ನಡೆಸಿರಬೇಕು ಎಂದು ಪೀಠವು ಹೇಳಿದೆ.
ಮದುವೆಯಾಗುವ ಭರವಸೆಯ ಕಾರಣಕ್ಕೆ ಸಂಬಂಧ ಉಂಟಾಗಿತ್ತು ಎಂದು ಭಾವಿಸಿವುದಾದರೂ, ಮದುವೆಯ ಭರವಸೆ ನೀಡಿ ಅತ್ಯಾಚಾರ ಎಸಗಲಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಚಟರ್ಜಿ ಅವರು ಹೆಂಡತಿಯಿಂದ ಬೇರೆ ಇದ್ದಾರಾದರೂ, ಅವರಿಗೆ ಮದುವೆ ಆಗಿದೆ ಎಂಬುದು ಮಹಿಳೆಗೆ ಮೊದಲ ದಿನದಿಂದಲೂ ತಿಳಿದಿತ್ತು ಎಂದು ವಿವರಿಸಿದೆ.




