ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಶಾರ್ಜೀಲ್ ಇಮಾಮ್ ಅವರನ್ನು ಒಂದು ಭಾಷಣಕ್ಕಾಗಿ ಬೇರೆ ಬೇರೆ ರಾಜ್ಯಗಳಲ್ಲಿ ಕಾನೂನು ಕ್ರಮಕ್ಕೆ ಗುರಿಪಡಿಸಬಹುದೇ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಪ್ರಶ್ನಿಸಿದೆ.
ತಮ್ಮ ವಿರುದ್ಧ ನಾಲ್ಕು ರಾಜ್ಯಗಳಲ್ಲಿ (ಉತ್ತರಪ್ರದೇಶ, ಅಸ್ಸಾಂ, ಮಣಿಪುರ ಮತ್ತು ಅರುಣಾಲ ಪ್ರದೇಶ) ದಾಖಲಾಗಿರುವ ಬೇರೆ ಬೇರೆ ಎಫ್‌ಐಆರ್‌ಗಳನ್ನು ಒಗ್ಗೂಡಿಸಬೇಕು ಎಂದು ಇಮಾಮ್ ಅವರು 2020ರಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರು ಇರುವ ವಿಭಾಗೀಯ ಪೀಠವು ನಡೆಸುತ್ತಿದೆ.
ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ ನಡೆಸಿದ ಪ್ರತಿಭಟನೆಗಳ ಸಂದರ್ಭದಲ್ಲಿ ಇಮಾಮ್ ಅವರು ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದಾರೆ ಎಂದು ದೂರು ದಾಖಲು ಮಾಡಲಾಗಿದೆ.
ಒಂದು ಭಾಷಣಕ್ಕಾಗಿ ಇಮಾಮ್ ಅವರನ್ನು ಬೇರೆ ಬೇರೆ ರಾಜ್ಯಗಳಲ್ಲಿ ವಿಚಾರಣೆಗೆ ಒಳಪಡಿಸಲು ಅವಕಾಶ ಇಲ್ಲ ಎಂದು ಅವರ ವಕೀಲರು ವಾದಿಸಿದರು. 'ಇಮಾಮ್ ಅವರು ಬಿಹಾರದಲ್ಲಿ, ಉತ್ತರ ಪ್ರದೇಶದಲ್ಲಿ, ದೆಹಲಿಯಲ್ಲಿ ಗುಂಪುಗಳನ್ನು ಪ್ರಚೋದಿಸುವ ಕೆಲಸ ಮಾಡಿದ್ದಾರೆ. ಅಪರಾಧ ಕೃತ್ಯಗಳು ಬೇರೆಬೇರೆ ಇವೆ' ಎಂದು ದೆಹಲಿ ಪೊಲೀಸರ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಪ್ರತಿವಾದ ಮಂಡಿಸಿದರು.
'ಆದರೆ ಭಾಷಣ ಒಂದೇ ಆಗಿದೆ. ಭಾಷಣವು ಯೂಟ್ಯೂಬ್‌ನಲ್ಲಿ ಇದೆ ಎಂದಾದರೆ, ಅದನ್ನು ಭಾರತದಾದ್ಯಂತ ಆಲಿಸಬಹುದು. ಅದರ ಪರಿಣಾಮ ಒಂದೇ ಆಗಿರುತ್ತದೆ' ಎಂದು ಸಿಜೆಐ ಹೇಳಿದರು. ಇಮಾಮ್ ವಿರುದ್ಧದ ಪ್ರಕರಣವನ್ನು ದೆಹಲಿಗೆ ವರ್ಗಾಯಿಸಬೇಕು ಎಂದರು.
ವಿಚಾರಣೆಯನ್ನು ಎರಡು ವಾರ ಮುಂದೂಡಲಾಗಿದೆ. ಇಮಾಮ್ ವಿರುದ್ಧ ದೆಹಲಿ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

