ಕೀವ್: ಉಕ್ರೇನ್‌ನ ನಾಗರಿಕ ಪ್ರದೇಶಗಳ ಮೇಲೆ ರಷ್ಯಾ ಮತ್ತೆ ಡ್ರೋನ್ ದಾಳಿ ನಡೆಸಿದೆ. ಈ ಘಟನೆಯಲ್ಲಿ 12 ವರ್ಷದ ಬಾಲಕಿ ಮೃತಪಟ್ಟಿದ್ದು, 3 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಮಂಗಳವಾರ ಆರೋಪಿಸಿದೆ.
ಆಗ್ನೇಯ ನಿಪ್ರೋಪೆಟ್ರೋವಸ್ಕ್ ನಗರದ ಮೇಲೆ ರಷ್ಯಾ ಡ್ರೋನ್‌ಗಳನ್ನು ಬಳಸಿ ದಾಳಿ ನಡೆಸಿದೆ.
ಜತೆಗೆ ಖಾರ್ಕೀವ್ ನಗರದ ಮೇಲೂ 20 ಡ್ರೋನ್, 31 ಬಾಂಬ್ ಬಳಸಿ ದಾಳಿ ನಡೆಸಿದೆ ಎಂದು ಉಕ್ರೇನ್ ಅಧಿಕಾರಿಗಳು ಆರೋಪಿಸಿದ್ದಾರೆ.
2ನೇ ಮಹಾಯುದ್ಧದ ಗೆಲುವಿನ ದಿನದ ಅಂಗವಾಗಿ ಮೇ 8ರಿಂದ 10ರವರೆಗೆ ಕದನವಿರಾಮ ಇರಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೋಮವಾರವಷ್ಟೇ ಹೇಳಿದ್ದರು. ಆ ಬೆನ್ನಲ್ಲೇ ಮತ್ತೆ ನಾಗರಿಕ ಪ್ರದೇಶಗಳ ಮೇಲೆ ದಾಳಿ ನಡೆದಿದೆ. ಹೀಗಾಗಿ ರಷ್ಯಾದ ಕದನವಿರಾಮ ಘೋಷಣೆಯು ಅಮೆರಿಕವನ್ನು ವಂಚಿಸಲು ರಷ್ಯಾ ಮಾಡಿರುವ ತಂತ್ರದ ಭಾಗವಷ್ಟೆ ಎಂದು ಉಕ್ರೇನ್ ಟೀಕಿಸಿದೆ.

