ಕಾಸರಗೋಡು : ಆಸ್ಪಿರೇಷನ್ ಬ್ಲಾಕ್ ಹೆಮ್ಮೆಯ ಸಾಧನೆಗಾಗಿ ಪರಪ್ಪ ಬ್ಲಾಕನ್ನು ಆಯ್ಕೆ ಮಾಡಲಾಗಿದ್ದು, ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠ ಸಾಧನೆಗಾಗಿ ಪ್ರಧಾನ ಮಂತ್ರಿಗಳ ಪ್ರಶಸ್ತಿ-2024 ಕ್ಕೆ ಆಯ್ಕೆ ಮಾಡಲಾಗಿದೆ. ನಾಗರಿಕ ಸೇವಾ ದಿನವಾದ ಏಪ್ರಿಲ್ 21 ರಂದು ನವದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ, ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಪರಪ್ಪ ಆಸ್ಪಿರೇಷನ್ ಬ್ಲಾಕ್‍ನಲ್ಲಿ ವಿವಿಧ ಕ್ಷೇತ್ರಗಳಲ್ಲಿ ನಿರ್ವಹಿಸಿರುವ ಅತ್ಯುತ್ತಮ ಕೆಲಸಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ, ಪರಪ್ಪ ಬ್ಲಾಕಿನ ಈ ಸಾಧನೆ ಇಂದು ಇದು ರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆಯುವಂತಾಗಿದೆ. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅವರ ನೇತೃತ್ವದಲ್ಲಿ, ವಿವಿಧ ಇಲಾಖೆಗಳನ್ನು ಸಮನ್ವಯಗೊಳಿಸುವುದರ ಜತೆಗೆ ಯೋಜನೆ, ಅಭಿವೃದ್ಧಿ ಮತ್ತು ಕಲ್ಯಾಣ ಚಟುವಟಿಕೆಗಳನ್ನು ಗುರುತಿಸಿ ವಿವಿಧ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಮೂಲಕ ಪರಪ್ಪ ಬ್ಲಾಕ್ ನಿರ್ಣಾಯಕ ಸಾಧನೆ ತೋರಿದೆ. 426 ಆಸ್ಪಿರೇಶನ್ ಬ್ಲಾಕ್‍ಗಳ ಪೈಕಿ ಪರಪ್ಪ ಬ್ಲಾಕ್ ಸಾರ್ವಜನಿಕ ಆಡಳಿತದಲ್ಲಿನ ಶ್ರೇಷ್ಠತೆಗಾಗಿ ಪ್ರಥಮ ಸ್ಥಾನ ಗಳಿಸಿದೆ. ಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಎಂ.ಲಕ್ಷ್ಮಿ ನೇತೃತ್ವದ ಆಡಳಿತ ಮಂಡಳಿಯ ಬೆಂಬಲ ಮತ್ತು ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ
ಪಾರದರ್ಶಕ ಮತ್ತು ಸಕಾಲಿಕವಾಗಿ ಯೋಜನೆಗಳನ್ನು ಕಾರ್ಯಗತಗೊಳಿಸಿದ ಅತ್ಯುತ್ತಮ ಕಾರ್ಯಕ್ಕಾಗಿ ಪರಪ್ಪ ಬ್ಲಾಕ್ ಪ್ರಧಾನ ಮಂತ್ರಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಪರಪ್ಪ ಬ್ಲಾಕಿನ ಬುಡಕಟ್ಟು ವಲಯದಲ್ಲಿ ಆರೋಗ್ಯ, ಸಮಾಜ ಕಲ್ಯಾಣ, ಕೃಷಿ, ಉದ್ಯಮಶೀಲತಾ ಅಭಿವೃದ್ಧಿ ಮತ್ತು ಕಲ್ಯಾಣ ಚಟುವಟಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಡೆಸಲಾದ ಅತ್ಯುತ್ತಮ ಕೆಲಸಗಳಿಗಾಗಿ ಈ ಪ್ರಶಸ್ತಿ ನೀಡಲಾಗಿದೆ. ಕಾಸರಗೋಡು ಜಿಲ್ಲಾಧಿಕಾರಿಯಾಗಿ ಕೆ. ಇನ್ಬಾಶೇಖರ್ ಅಧಿಕಾರ ವಹಿಸಿಕೊಂಡ ನಂತರ ಜಿಲ್ಲೆಗೆ ಐದು ಪ್ರಶಸ್ತಿ ಲಭಿಸಿದ್ದು, ಇದೇ ಮೊದಲ ಬಾರಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅತ್ಯುತ್ತಮ ಜಿಲ್ಲಾಧಿಕಾರಿ ಪ್ರಶಸ್ತಿ, ಸಾಮಾಜಿಕ ನ್ಯಾಯ ಇಲಾಖೆಯ ಉತ್ತಮ ಜಿಲ್ಲಾಡಳಿತಕ್ಕಿರುವ ಪ್ರಶಸ್ತಿ, 2024 ರ ಲೋಕಸಭಾ ಚುನಾವಣೆಯಲ್ಲಿ ನವೀನ ವಿಚಾರಗಳನ್ನು ಪರಿಚಯಿಸಿದ ಅತ್ಯುತ್ತಮ ಚುನಾವಣಾ ಅಧಿಕಾರಿಗಿರುವ ಪ್ರಶಸ್ತಿ, ಡಿಜಿಟಲ್ ಸರ್ವೇ ಚಟುವಟಿಕೆಗಳಿಗಾಗಿ ಅತ್ಯುತ್ತಮ ಜಿಲ್ಲಾಧಿಕಾರಿ ಪ್ರಶಸ್ತಿ ಕೆ. ಇನ್ಬಾಶೇಖರ್ ಅವರಿಗೆ ಲಭಿಸಿದೆ.





