ನವದೆಹಲಿ: ಸುಪ್ರೀಂ ಕೋರ್ಟ್ ಕಾರ್ಯವೈಖರಿ ಟೀಕಿಸಿ ತನ್ನ ಸಂಸದರು ನೀಡಿರುವ ಹೇಳಿಕೆಗಳಿಂದ ಅಂತರ ಕಾಯ್ದುಕೊಂಡಿರುವ ಬಿಜೆಪಿಯ ನಡೆಯನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ.
'ಸುಪ್ರೀಂ ಕೋರ್ಟ್ ಟೀಕಿಸಿರುವ ಸಂಸದರಾದ ನಿಶಿಕಾಂತ್ ದುಬೆ ಹಾಗೂ ದಿನೇಶ್ ಶರ್ಮಾ ಅವರನ್ನು ಪಕ್ಷದಿಂದ ಉಚ್ಚಾಟಿಸುವುದೇ ಅವರ ವಿರುದ್ದ ಬಿಜೆಪಿ ಕೈಗೊಳ್ಳಬಹುದಾದ ಕನಿಷ್ಠ ಮಟ್ಟದ ಕ್ರಮವಾಗಿದೆ' ಎಂದೂ ಚಾಟಿ ಬೀಸಿದೆ.
'ಈ ವಿಚಾರಕ್ಕೆ ಸಂಬಂಧಿಸಿ ಈ ಇಬ್ಬರು ಸಂಸದರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ? ಅವರಿಗೆ ಕಾರಣ ಕೇಳಿ ನೋಟಿಸ್ ನೀಡಿಲ್ಲ ಏಕೆ' ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
'ಇಂತಹ ಹೇಳಿಕೆಗಳಿಂದ ಯಾರನ್ನೂ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ. ಸಂಪೂರ್ಣ ರಾಜಕೀಯ ಶಾಸ್ತ್ರವು ಸಂಪೂರ್ಣ ರಾಜಕೀಯ ಬೂಟಾಟಿಕೆ ರೂಪದಲ್ಲಿ ವ್ಯಕ್ತವಾಗುತ್ತಿರುವ ಪರಿ ಇದು' ಎಂದು ವ್ಯಂಗ್ಯವಾಡಿದ್ದಾರೆ.
'ಬಿಜೆಪಿಯ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಲಿರುವವರು ಪಕ್ಷದ ಇಬ್ಬರು ಸಂಸದರು ಸುಪ್ರೀಂ ಕೋರ್ಟ್ ಮತ್ತು ಸಿಜೆಐ ವಿರುದ್ಧ ನೀಡಿರುವ ಅವಹೇಳನಕಾರಿ ಹೇಳಿಕೆಗಳಿಂದ ಅಂತರ ಕಾಯ್ದುಕೊಂಡಿರುವುದು ಸರಿಯಲ್ಲ' ಎಂದು ಜೈರಾಮ್ ರಮೇಶ್ ಟೀಕಿಸಿದ್ದಾರೆ.
'ಈ ಇಬ್ಬರು ಸಂಸದರು ಪದೇಪದೇ ದ್ವೇಷದ ಮಾತುಗಳನ್ನಾಡುತ್ತಾರೆ. ಕೆಲ ಸಮುದಾಯಗಳು, ಸಂಸ್ಥೆಗಳು ಹಾಗೂ ವ್ಯಕ್ತಿಗಳ ಕುರಿತು ಕೀಳು ಭಾಷೆ ಬಳಸಿ ದಾಳಿ ಮಾಡುತ್ತಾರೆ. ಈ ಇಬ್ಬರು ಸಂಸದರ ಹೇಳಿಕೆಗಳ ಕುರಿತು ಬಿಜೆಪಿ ಅಧ್ಯಕ್ಷರು ನೀಡಿರುವ ಸ್ಪಷ್ಟನೆ ಡ್ಯಾಮೇಜ್ ಕಂಟ್ರೋಲ್ ಪ್ರಯತ್ನವಷ್ಟೆ' ಎಂದು ಅವರು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜೈರಾಮ್ ಅವರ ಪೋಸ್ಟ್ ಅನ್ನು ಕಾಂಗ್ರೆಸ್‌ನ ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಅವರು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದು, 'ಈ ಇಬ್ಬರು ಸಂಸದರ ವಿರುದ್ಧ ಬಿಜೆಪಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬುದು ನಮಗೆ ಗೊತ್ತು' ಎಂದಿದ್ದಾರೆ.
'ಎಲ್ಲ ಕಾನೂನುಗಳನ್ನು ಸುಪ್ರೀಂ ಕೋರ್ಟ್ ರೂಪಿಸುವುದಾದರೆ ಸಂಸತ್ ಹಾಗೂ ರಾಜ್ಯ ವಿಧಾನಸಭೆಗಳನ್ನು ಮುಚ್ಚಿಡಬೇಕು' ಎಂದು ದುಬೆ ಅವರು ಶನಿವಾರ ಹೇಳಿದ್ದರು.
'ದೇಶದಲ್ಲಿ ನಡೆಯುತ್ತಿರುವ ಸಂಘರ್ಷಗಳಿಗೆ ಸಿಜೆಐ ಸಂಜೀವ್ ಖನ್ನಾ ಅವರೇ ಹೊಣೆ' ಎಂದೂ ದುಬೆ ಆರೋಪಿಸಿದ್ದರು.
ಬಿಜೆಪಿಯ ಮತ್ತೊಬ್ಬ ಸಂಸದ ದಿನೇಶ್ ಶರ್ಮಾ,'ಸಂಸತ್ ಹಾಗೂ ರಾಷ್ಟ್ರಪತಿ ಅವರಿಗೆ ಯಾರೂ ಆದೇಶ ನೀಡುವಂತಿಲ್ಲ' ಎಂದಿದ್ದರು.
ಈ ಇಬ್ಬರ ಹೇಳಿಕೆಗಳಿಂದ ಬಿಜೆಪಿ ಶನಿವಾರ ಅಂತರ ಕಾಯ್ದುಕೊಂಡಿತ್ತು. ಇವು ಸಂಸದರ ವೈಯಕ್ತಿಕ ಹೇಳಿಕೆಗಳು ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಪ್ರತಿಕ್ರಿಯಿಸಿದ್ದರು.
'ಪ್ರಜಾಪ್ರಭುತ್ವ ವ್ಯವಸ್ಥೆಯ ಅವಿಭಾಜ್ಯ ಅಂಗವಾದ ನ್ಯಾಯಾಂಗವನ್ನು ಬಿಜೆಪಿ ಗೌರವಿಸುತ್ತದೆ. ದುಬೆ ಹಾಗೂ ಶರ್ಮಾ ಅವರ ನಿಲುವುಗಳನ್ನು ಬಿಜೆಪಿ ಒಪ್ಪುವುದಿಲ್ಲ ಹಾಗೂ ಇಂತಹ ಹೇಳಿಕೆಗಳನ್ನು ಬೆಂಬಲಿಸುವುದಿಲ್ಲ. ಈ ಹೇಳಿಕೆಗಳನ್ನು ಪಕ್ಷ ಸಾರಾಸಗಟಾಗಿ ತಿರಸ್ಕರಿಸುತ್ತದೆ' ಎಂದು ಅವರು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದರು.
ದುಬೆ ವಿರುದ್ಧ ನ್ಯಾಯಾಂಗ ನಿಂದನೆ: ಅನುಮತಿ ಕೋರಿದ ವಕೀಲ
'ಸುಪ್ರೀಂ ಕೋರ್ಟ್ ಘನತೆಗೆ ಧಕ್ಕೆ ತರುವಂತಹ ಹೇಳಿಕೆ ನೀಡಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ನೀಡಬೇಕು' ಎಂದು ಕೋರಿ ಸುಪ್ರೀಂ ಕೋರ್ಟ್ ವಕೀಲ ಅನಸ್ ತನ್ವೀರ್ ಅವರು ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರಿಗೆ ಪತ್ರ ಬರೆದಿದ್ದಾರೆ. 'ಸಂಸದ ದುಬೆ ಅವರ ಹೇಳಿಕೆಗಳು ಅವಹೇಳನಕಾರಿ ಹಾಗೂ ಪ್ರಚೋದನಕಾರಿಯಾಗಿವೆ' ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಖುರೇಷಿ 'ಮುಸ್ಲಿಂ ಆಯುಕ್ತ'ರಾಗಿದ್ದರು: ದುಬೆ ಟೀಕೆ
ಸುಪ್ರೀಂ ಕೋರ್ಟ್ ಮತ್ತು ಸಿಜೆಐ ವಿರುದ್ಧದ ಹೇಳಿಕೆಗಳಿಂದಾಗಿ ವಿಪಕ್ಷಗಳ ವಾಗ್ದಾಳಿಗೆ ಗುರಿಯಾಗಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಖುರೇಷಿ ವಿರುದ್ಧ ಭಾನುವಾರ ಟೀಕಾಪ್ರಹಾರ ನಡೆಸಿದ್ದಾರೆ. 'ಖುರೇಷಿ ಅವರು ಚುನಾವಣಾ ಆಯುಕ್ತರಾಗಿರಲಿಲ್ಲ ಬದಲಿಗೆ ಮುಸ್ಲಿಂ ಆಯುಕ್ತರಾಗಿದ್ದರು' ಎಂದು ಟೀಕಿಸಿದ್ದಾರೆ.
ವಕ್ಫ್ ಕಾಯ್ದೆ ಕುರಿತು ಖುರೇಷಿ ಅವರು ಏಪ್ರಿಲ್ 17ರಂದು 'ಎಕ್ಸ್'ನಲ್ಲಿ ಮಾಡಿದ್ದ ಪೋಸ್ಟ್ ಪ್ರಸ್ತಾಪಿಸಿ ದುಬೆ ವಾಗ್ದಾಳಿ ನಡೆಸಿದ್ದಾರೆ. 'ಮುಸ್ಲಿಮರ ಭೂಮಿಯನ್ನು ಕಬಳಿಸಲು ಕೇಂದ್ರ ಸರ್ಕಾರ ರೂಪಿಸಿರುವ ದುಷ್ಟ ಯೋಜನೆಯೇ ಈ ವಕ್ಫ್ ಕಾಯ್ದೆ. ಸುಪ್ರೀಂ ಕೋರ್ಟ್ ಇದನ್ನು ಗಮನಿಸುತ್ತದೆ ಎಂಬ ವಿಶ್ವಾಸ ನನಗಿದೆ. ದುರುದ್ದೇಶದಿಂದ ತಪ್ಪು ಮಾಹಿತಿ ಪ್ರಚಾರ ಮಾಡುವ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡಲಾಗಿದೆ' ಎಂದು ಖುರೇಷಿ ಪೋಸ್ಟ್ ಮಾಡಿದ್ದರು.
'ನೀವು ಚುನಾವಣಾ ಆಯುಕ್ತರಂತೆ ಕಾರ್ಯ ನಿರ್ವಹಿಸಲಿಲ್ಲ. ನೀವು ಒಬ್ಬ ಮುಸ್ಲಿಂ ಆಯುಕ್ತರಾಗಿದ್ದಿರಿ. ನಿಮ್ಮ ಅಧಿಕಾರದ ಅವಧಿಯಲ್ಲಿಯೇ ಜಾರ್ಖಂಡ್‌ನ ಸಂಥಾಲ್ ಪರಗಣದಲ್ಲಿ ಗರಿಷ್ಠ ಸಂಖ್ಯೆಯ ಬಾಂಗ್ಲಾದೇಶದ ನುಸುಳಕೋರರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ' ಎಂದು ದುಬೆ ಆರೋಪಿಸಿದ್ದಾರೆ. 'ಕ್ರಿ.ಶ. 712ರಲ್ಲಿ ಇಸ್ಲಾಂ ಭಾರತಕ್ಕೆ ಬಂತು. ವಕ್ಫ್‌ಗೆ ಸೇರಿದ್ದು ಎನ್ನುವ ಭೂಮಿ ಆಗ ಹಿಂದೂಗಳು ಅಥವಾ ಬುಡಕಟ್ಟು ಜನರು ಜೈನರು ಇಲ್ಲವೇ ಬೌದ್ಧರಿಗೆ ಸೇರಿತ್ತು' ಎಂದೂ ಹೇಳಿದ್ದಾರೆ.
'ನನ್ನ ಗ್ರಾಮ ವಿಕ್ರಮಶಿಲೆಯನ್ನು ಭಕ್ತಿಯಾರ್ ಖಿಲ್ಜಿ 1189ರಲ್ಲಿ ಸುಟ್ಟು ಹಾಕಿದ. ವಿಕ್ರಮಶಿಲಾ ವಿಶ್ವವಿದ್ಯಾಲಯವೇ ಮೊಟ್ಟಮೊದಲ ಕುಲಪತಿ ಆತಿಶ ದೀಪಾಂಕರ್ ಅವರನ್ನು ಜಗತ್ತಿಗೆ ನೀಡಿದೆ' ಎಂದಿದ್ದಾರೆ.
'ಇತಿಹಾಸ ಓದಿ ದೇಶವನ್ನು ಒಗ್ಗೂಡಿಸಿ. ದೇಶವನ್ನು ಇಬ್ಭಾಗ ಮಾಡುವ ಮೂಲಕ ಪಾಕಿಸ್ತಾನ ರಚಿಸಲಾಯಿತು. ಈಗ ಮತ್ತೊಮ್ಮೆ ದೇಶ ವಿಭಜನೆ ಮಾಡುವುದಿಲ್ಲ' ಎಂದೂ ಹೇಳಿದ್ದಾರೆ.




