ಹೈದರಾಬಾದ್ : ತೆಲಂಗಾಣದ ಉಪ್ಪಲ್‌ನಲ್ಲಿರುವ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಉತ್ತರ ಪೆವಿಲಿಯನ್ ಸ್ಟ್ಯಾಂಡ್‌ನಿಂದ ಮುಹಮ್ಮದ್ ಅಝರುದ್ದೀನ್ ಅವರ ಹೆಸರನ್ನು ತೆಗೆದುಹಾಕಲು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ನಿರ್ದೇಶನ ನೀಡಿದೆ.
ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿ ಮತ್ತು ಒಂಬುಡ್ಸ್ಮನ್ ನ್ಯಾಯಮೂರ್ತಿ ವಿ ಈಶ್ವರಯ್ಯ ಅವರು ಶನಿವಾರ ಈ ಆದೇಶ ನೀಡಿದ್ದಾರೆ.
ಅಝರುದ್ದೀನ್ ಸ್ಟ್ಯಾಂಡ್ ಹೆಸರಿನೊಂದಿಗೆ ಇನ್ನು ಮುಂದೆ ಟಿಕೆಟ್‌ಗಳನ್ನು ನೀಡದಂತೆ ಎಚ್‌ಸಿಎಗೆ ಸೂಚನೆ ನೀಡಲಾಗಿದೆ.
ಮುಹಮ್ಮದ್ ಅಝರುದ್ದೀನ್ 2019ರಲ್ಲಿ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿದ್ದರು. ಈ ವೇಳೆ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿರುವ ಉತ್ತರ ಪೆವಿಲಿಯನ್ ಸ್ಟ್ಯಾಂಡ್ ಅನ್ನು ಲಕ್ಷ್ಮಣ್ ಪೆವಿಲಿಯನ್‌ನಿಂದ ಮುಹಮ್ಮದ್ ಅಝರುದ್ದೀನ್ ಸ್ಟ್ಯಾಂಡ್ ಎಂದು ನಾಮಕರಣ ಮಾಡಲಾಗಿತ್ತು.
ಅಝರುದ್ದೀನ್ ತನ್ನ ಸ್ಥಾನವನ್ನು ವೈಯಕ್ತಿಕ ಲಾಭಕ್ಕಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಲಾರ್ಡ್ಸ್ ಕ್ರಿಕೆಟ್ ಕ್ಲಬ್ ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಲಾರ್ಡ್ಸ್ ಕ್ರಿಕೆಟ್ ಕ್ಲಬ್ ಸಲ್ಲಿಸಿದ ಅರ್ಜಿಯಲ್ಲಿ, ಉತ್ತರ ಸ್ಟ್ಯಾಂಡ್ ಹೆಸರನ್ನು ವಿವಿಎಸ್ ಲಕ್ಷ್ಮಣ್ ಸ್ಟ್ಯಾಂಡ್ ಎಂದು ಮರುನಾಮಕರಣ ಮಾಡಬೇಕು ಮತ್ತು ಎಲ್ಲಾ ಸೈನ್‌ಬೋರ್ಡ್‌ಗಳು, ಟಿಕೆಟ್ ಮುದ್ರಣ ಇತ್ಯಾದಿಗಳಲ್ಲಿ ಅದೇ ಹೆಸರನ್ನು ಬಳಸಬೇಕೆಂದು ವಿನಂತಿಸಲಾಗಿತ್ತು.




