ಕೀವ್: ಉಕ್ರೇನ್ ಮೇಲೆ ರಷ್ಯಾ ರಾತ್ರಿಯಿಡೀ ನಡೆಸಿದ ಡ್ರೋನ್ ದಾಳಿಯಲ್ಲಿ ಒಬ್ಬರು ಮೃತಪಟ್ಟಿದ್ದು, ಮೂವರು ಮಕ್ಕಳು ಸೇರಿ 10 ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಈ ದಾಳಿಯಿಂದ ದೇಶದ ಎರಡು ಪ್ರದೇಶಗಳಲ್ಲಿನ ಪ್ರಮುಖ ಇಂಧನ ಸೌಲಭ್ಯಗಳಿಗೆ ಹಾನಿಯಾಗಿದೆ.
ಈಶಾನ್ಯದ ಸುಮಿ ಪ್ರದೇಶದ ಉಪ ಸ್ಥಾವರಕ್ಕೆ ಡ್ರೋನ್ ಅಪ್ಪಳಿಸಿದೆ. ಅಲ್ಲದೆ, ನಿಪ್ರೊಪೆಟ್ರೋವ್‌ಸ್ಕ್ ಪ್ರದೇಶದ ವಿದ್ಯುತ್ ಮಾರ್ಗವನ್ನು ಫಿರಂಗಿ ದಾಳಿ ಹಾನಿಗೊಳಿಸಿದೆ. ಸುಮಾರು 4 ಸಾವಿರ ಗ್ರಾಹಕರಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.
'ರಷ್ಯಾದ ಈ ವ್ಯವಸ್ಥಿತ ಮತ್ತು ನಿರಂತರ ದಾಳಿಯ ಸ್ವರೂಪವು ರಾಜತಾಂತ್ರಿಕ ಪ್ರಯತ್ನಗಳನ್ನು ತಿರಸ್ಕರಿಸುತ್ತಿರುವುದರ ಸ್ಪಷ್ಟ ಸೂಚನೆ. ಈ ಯುದ್ಧ ಕೊನೆಗೊಳಿಸುವ ಹಾದಿಗೆ ತರಲು ರಷ್ಯಾದ ಮೇಲೆ ಹೊಸದಾಗಿ ಮತ್ತು ಸ್ಪಷ್ಟವಾದ ಒತ್ತಡವನ್ನು ಹೇರುವ ಅಗತ್ಯವಿದೆ' ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ.
ರಷ್ಯಾ ಸೇನೆ 74 ಡ್ರೋನ್‌ಗಳನ್ನು ಪ್ರಯೋಗಿಸಿದೆ. ಇದರಲ್ಲಿ 41 ಡ್ರೋನ್‌ಗಳನ್ನು ವಾಯು ಪಡೆ ಹೊಡೆದುರುಳಿಸಿದೆ. ಇನ್ನು 20 ಡ್ರೋನ್‌ಗಳು ಗುರಿ ಮುಟ್ಟಿಲ್ಲ ಎಂದು ಉಕ್ರೇನ್ ಸೇನೆ ತಿಳಿಸಿದೆ.




