HEALTH TIPS

ಬಾಂಗ್ಲಾದೇಶದಲ್ಲಿ ಹಿಂದೂ ಮುಖಂಡನನ್ನು ಕಿಡ್ನ್ಯಾಪ್‌ ಮಾಡಿ ಬರ್ಬರ ಹತ್ಯೆ

ಢಾಕಾ: ಅಲ್ಪಸಂಖ್ಯಾತರ (Minorities) ರಕ್ಷಣೆ ಮಾಡುವಂತೆ ಭಾರತಕ್ಕೆ ಬುದ್ದಿ ಹೇಳಲು ಬಂದಿದ್ದ ಬಾಂಗ್ಲಾದೇಶದಲ್ಲಿ (Bangladesh Unrest) ಇದೀಗ ಮತ್ತೊಬ್ಬ ಹಿಂದೂ ನಾಯಕನನ್ನು(Hindu leader) ಕೊಲೆ ಮಾಡಲಾಗಿದೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದರೂ ಅಲ್ಲಿನ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿವೆ.

ಇದೀಗ ನಡೆದ ಮತ್ತೊಂದು ಹಿಂಸಾಚಾರ ಘಟನೆಯಲ್ಲಿ ದಿನಾಜ್‌ಪುರದ ಬೀರಲ್ ಉಪಜಿಲ್ಲಾದಲ್ಲಿ ಹಿಂದೂ ಸಮುದಾಯದ ಪ್ರಮುಖ ನಾಯಕ ಭಬೇಶ್ ಚಂದ್ರ ಎಂಬಾತನನ್ನು ಅಪಹರಿಸಿ ಕ್ರೂರವಾಗಿ ಹಲ್ಲೆ ಮಾಡಿ ಕೊಂದಿರುವುದಾಗಿ ಸ್ಥಳೀಯ ಪೊಲೀಸರು ಮತ್ತು ಕುಟುಂಬ ಸದಸ್ಯರು ದೃಢಪಡಿಸಿದ್ದಾರೆ.

ಬಾಂಗ್ಲಾದೇಶ ಪೂಜಾ ಉದ್ಜಪನ್ ಪರಿಷತ್‌ನ ಬೀರಲ್ ಘಟಕದ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿರುವ ಭಬೇಶ್ ಚಂದ್ರನನ್ನು ಕ್ರೂರವಾಗಿ ಥಳಿಸಿ ಕೊಲೆ ಮಾಡಲಾಗಿದೆ. ಈ ಕುರಿತು ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಭಬೇಶ್ ಚಂದ್ರ ಅವರ ಪತ್ನಿ ಶಾಂತನಾ ರಾಯ್, ಗುರುವಾರ ಎರಡು ಮೋಟಾರ್‌ಸೈಕಲ್‌ಗಳಲ್ಲಿ ಬಂದ ವ್ಯಕ್ತಿಗಳು ಭಬೇಶ್ ಅವರನ್ನು ಅಪಹರಿಸಿದ್ದಾರೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಅವರು ಭಬೇಶ್ ಅವರನ್ನು ನರಬರಿ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಅವರನ್ನು ಕ್ರೂರವಾಗಿ ಥಳಿಸಿದ್ದಾರೆ.

ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಭಬೇಶ್ ಅವರ ದೇಹವನ್ನು ವ್ಯಾನ್‌ನಲ್ಲಿ ಮನೆಗೆ ಕಳುಹಿಸಿದ್ದಾರೆ. ತಕ್ಷಣವೇ ಅವರನ್ನು ಬೀರಲ್ ಉಪಜಿಲ್ಲಾ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿಂದ ದಿನಾಜ್‌ಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಯಿತು. ಆದರೆ ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ ಎಂದು ತಿಳಿಸಿದರು. ಪೊಲೀಸರು ಆರೋಪಿಗಳನ್ನು ಗುರುತಿಸಿ ಬಂಧಿಸಲು ತನಿಖೆ ನಡೆಸುತ್ತಿದ್ದಾರೆ ಮತ್ತು ಪ್ರಕರಣ ದಾಖಲಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಬಿರಾಲ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ತಿಳಿಸಿದ್ದಾರೆ.

ಬಾಂಗ್ಲಾದೇಶದಾದ್ಯಂತ ಹಿಂದೂ ಸಮುದಾಯದ ಮನೆ, ದೇವಾಲಯ ಮತ್ತು ವ್ಯಾಪಾರ ಸಂಸ್ಥೆಗಳು ಸೇರಿದಂತೆ ಒಟ್ಟು 147 ಧ್ವಂಸ ಪ್ರಕರಣಗಳು ನಡೆದಿರುವುದಾಗಿ ಕಳೆದ ತಿಂಗಳಲ್ಲಿ ಢಾಕಾ ಮೂಲದ ಮಾನವ ಹಕ್ಕುಗಳ ಸಂಘಟನೆಯಾದ ಐನ್.ಓ. ಸಲಿಶ್ ಕೇಂದ್ರ (AsK) ವರದಿ ಮಾಡಿತ್ತು.

ಈವರೆಗೆ ಸುಮಾರು 408 ಮನೆಗಳು ಧ್ವಂಸಗೊಂಡಿವೆ. ಇದರಲ್ಲಿ 36 ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು. ಅಲ್ಪಸಂಖ್ಯಾತರ ಒಡೆತನದ 113 ವ್ಯಾಪಾರ ಸಂಸ್ಥೆಗಳ ಮೇಲೆ ದಾಳಿ ಮಾಡಲಾಗಿದೆ. 32 ಅಹ್ಮದೀಯ ಪಂಥದ ದೇವಾಲಯ ಮತ್ತು ಮಸೀದಿಗಳ ಮೇಲೆ ದಾಳಿ ಮಾಡಲಾಗಿದ್ದು, 92 ದೇವಾಲಯಗಳಲ್ಲಿ ವಿಗ್ರಹಗಳನ್ನು ಧ್ವಂಸ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

2024ರ ಸೆಪ್ಟೆಂಬರ್ ನಲ್ಲಿ ಅವಾಮಿ ಲೀಗ್ ಸರ್ಕಾರದ ಪತನದ ಬಳಿಕ ದೇಶಾದ್ಯಂತ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ವಿಶೇಷವಾಗಿ ಹಿಂದೂ ಸಮುದಾಯದ ಮೇಲೆ ಹಲವಾರು ದಾಳಿಗಳು ನಡೆದಿವೆ. ಅನೇಕ ಪ್ರದೇಶಗಳಲ್ಲಿ ಹಿಂದೂಗಳ ಮನೆ, ವ್ಯಾಪಾರ ಸಂಸ್ಥೆಗಳು ಮತ್ತು ಪೂಜಾ ಸ್ಥಳಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳ ವಿರುದ್ಧ ಭಾರತ ಪದೇ ಪದೇ ಕಳವಳ ವ್ಯಕ್ತಪಡಿಸಿದೆ. ಈ ತಿಂಗಳ ಆರಂಭದಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಬಿಮ್‌ಸ್ಟೆಕ್ ಶೃಂಗಸಭೆಯ ವೇಳೆ ಯೂನಸ್ ಅವರೊಂದಿಗಿನ ಮಾತುಕತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೂಗಳು ಸೇರಿದಂತೆ ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಭದ್ರತೆಯ ವಿಷಯದ ಕುರಿತು ಚರ್ಚೆ ನಡೆಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries