ಕೀವ್: ಈಸ್ಟರ್ ಪ್ರಯುಕ್ತ ತಾತ್ಕಾಲಿಕ ಕದನ ವಿರಾಮ ಘೋಷಿಸಿ, ದಾಳಿ ಮುಂದುವರಿಸಿರುವ ರಷ್ಯಾ ನಡೆಯನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಭಾನುವಾರ ಟೀಕಿಸಿದ್ದಾರೆ.
'ಈಸ್ಟರ್‌ಗೆ ಗೌರವಿಸುವ ಉದ್ದೇಶದಿಂದ ರಷ್ಯಾ ತಾತ್ಕಾಲಿಕ ಕದನ ವಿರಾಮ ಘೋಷಿಸಿದೆ ಎಂಬ ಭಾವನೆ ಮೂಡಿಸುವ ಪ್ರಯತ್ನ ಇದಾಗಿದೆ.
ಆದರೆ, ತಾತ್ಕಾಲಿಕ ಕದನ ವಿರಾಮ ಘೋಷಿಸಿದ ಮೇಲೂ ರಾತ್ರಿ ವೇಳೆ ಕೆಲ ಸ್ಥಳಗಳ ಮೇಲೆ ರಷ್ಯಾ ಪಡೆಗಳು ದಾಳಿ ನಡೆಸಿವೆ' ಎಂದು ಅವರು 'ಎಕ್ಸ್'ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ಟೀಕಿಸಿದ್ದಾರೆ.
'ಭಾನುವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ 30 ದಿನದ ವರೆಗೆ ಕದನ ವಿರಾಮ ವಿಸ್ತರಿಸಲು ಉಕ್ರೇನ್ ಸಿದ್ಧವಿದೆ. ರಷ್ಯಾ ಕೂಡ ಕದನ ವಿರಾಮಕ್ಕೆ ಸಂಬಂಧಿಸಿದ ನಿಬಂಧನೆಗಳಿಗೆ ಬದ್ಧವಾಗಿರಬೇಕು' ಎಂದು ಅವರು ಹೇಳಿದ್ದಾರೆ.
'ಕದನ ವಿರಾಮ ಕುರಿತ ಮಾತುಕತೆಗೆ ನಾವು ಮುಕ್ತವಾಗಿದ್ದೇವೆ. ವಾಸ್ತವಿಕ ಸಂಗತಿಗಳ ಆಧಾರದ ಮೇಲೆ ನಾವು ನಮ್ಮ ಮುಂದಿನ ಹೆಜ್ಜೆ ಇಡುತ್ತೇವೆ' ಎಂದೂ ಅವರು ಪುನರುಚ್ಚರಿಸಿದ್ದಾರೆ.
ಸ್ಥಳೀಯ ಕಾಲಮಾನದಂತೆ, ರಷ್ಯಾ ಅಧ್ಯಕ್ಷ ಪುಟಿನ್ ಅವರು ಏಪ್ರಿಲ್ 19ರ ಸಂಜೆ 6ರಿಂದ ಭಾನುವಾರ ಮಧ್ಯರಾತ್ರಿ ವರಗೆ ತಾತ್ಕಾಲಿಕ ಕದನ ವಿರಾಮ ಘೋಷಿಸಿದ್ದರು.




