ಕಠ್ಮಂಡು: ನೇಪಾಳದಲ್ಲಿ ರಾಜಪ್ರಭುತ್ವದ ಮರು ಸ್ಥಾಪಿಸಬೇಕು ಹಾಗೂ ಹಿಂದೂ ರಾಷ್ಟ್ರವೆಂದು ಘೋಷಿಸಬೇಕು ಎಂದು ಒತ್ತಾಯಿಸಿ ನೂರಾರು ಮುಖಂಡರು ಹಾಗೂ ರಾಷ್ಟ್ರೀಯ ಪ್ರಜಾತಂತ್ರ ಪಕ್ಷದ (ಆರ್‌ಪಿಪಿ) ಕಾರ್ಯಕರ್ತರು ಪ್ರಧಾನಿ ಕಚೇರಿ ಮತ್ತು ಸಂಸತ್ ಕಟ್ಟಡದ ಬಳಿ ಭಾನುವಾರ ಪ್ರತಿಭಟನೆ ನಡೆಸಿದರು.
ಬಿಜುಲಿಬಜಾರ್-ಬಾನೇಶ್ವರ್ ಪ್ರದೇಶದಲ್ಲಿ ಸೇರಿದ ಸುಮಾರು 1500 ಪ್ರತಿಭಟನಕಾರರು, 'ಪ್ರಜಾಪ್ರಭುತ್ವವಾದಿ ವ್ಯವಸ್ಥೆಗೆ ಧಿಕ್ಕಾರ', 'ನಮಗೆ ರಾಜಪ್ರಭುತ್ವ ಬೇಕು', 'ಭ್ರಷ್ಟ ಸರ್ಕಾರಕ್ಕೆ ಧಿಕ್ಕಾರ' ಎಂಬ ಘೋಷಣೆಗಳನ್ನು ಕೂಗಿದರು.
ಕಠ್ಮಂಡುವಿನ ಸೂಕ್ಷ್ಮ ಪ್ರದೇಶಗಳಲ್ಲಿ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿತ್ತು. ರಾಜಪ್ರಭುತ್ವ ಅಸ್ತಿತ್ವಕ್ಕೆ ಬರುವವರೆಗೂ ಪ್ರತಿಭಟನೆಯನ್ನು ಮುಂದುವರಿಸಲಾಗುವುದು ಎಂದು ಆರ್‌ಪಿಪಿ ಮುಖಂಡರು ತಿಳಿಸಿದ್ದಾರೆ.
ಮತ್ತೊಂದೆಡೆ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು ಮತ್ತು ವೇತನ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಕಠ್ಮಂಡುವಿನ ನಯಾ ಬಾನೇಶ್ವರ್‌ನಲ್ಲಿ ಸಾವಿರಾರು ಶಿಕ್ಷಕರು ಪ್ರತಿಭಟನೆ ಕೈಗೊಂಡಿದ್ದರು.




