ಪತ್ತನಂತಿಟ್ಟ: ಶಬರಿಮಲೆ ದೇಗುಲದಲ್ಲಿ ಅಯ್ಯಪ್ಪ ದೇವರ ಮುಂದೆ ಸಿದ್ಧಪಡಿಸಲಾಗಿದ್ದ ವಿಷು ಕಣಿ ವೀಕ್ಷಿಸಲು ಸನ್ನಿಧಾನದಲ್ಲಿ ಸಾವಿರಾರು ಭಕ್ತರು ಆಗಮಿಸಿದ್ದರು.
ಶಬರಿಮಲೆಯಲ್ಲಿ ಬೆಳಗಿನ ಜಾವದಿಂದಲೇ ಭಾರಿ ಜನದಟ್ಟಣೆ ಕಂಡುಬಂದಿದೆ. ಸಂಜೆ 4 ಗಂಟೆಗೆ ತಂತ್ರಿ ಕಂಠಾರರ್ ರಾಜೀವರ ಸಮ್ಮುಖದಲ್ಲಿ, ಮೇಲ್ಶಾಂತಿ ಅರುಣಕುಮಾರ ನಂಬೂದಿರಿ ದೇವಾಲಯದ ಬಾಗಿಲು ತೆರೆದು ದೀಪ ಬೆಳಗಿಸಿದರು.
ಅಯ್ಯಪ್ಪ ಸ್ವಾಮಿಯ ಮುಂದೆ ವಿಷು ಕಣಿ ವೀಕ್ಷಿಸಿದ ನಂತರ ಭಕ್ತರು ಬೆಟ್ಟ ಇಳಿದರು. ತಂತ್ರಿ ಮತ್ತು ಮೇಲ್ಶಾಂತಿ ಭಕ್ತರಿಗೆ ವಿಷು ಶುಭಾಶಯಗಳನ್ನು ಕೋರಿದರು. ದೇವಾಲಯದಲ್ಲಿ ಪೂಜಿಸಲ್ಪಡುವ ಅಯ್ಯಪ್ಪ ಸ್ವಾಮಿಯ ಚಿತ್ರವಿರುವ ಚಿನ್ನದ ಲಾಕೆಟ್ ಅನ್ನು ಸಹ ವಿತರಿಸಲಾಯಿತು. ವಿತರಣೆಯನ್ನು ದೇವಸ್ವಂ ಸಚಿವ ವಿ.ಎನ್. ವಾಸವನ್ ಉದ್ಘಾಟಿಸಿದರು.
ಶಬರಿಮಲೆ ದೇವಸ್ವಂ ಮಂಡಳಿಯ ವೆಬ್‍ಸೈಟ್ ಮೂಲಕ ಬುಕ್ ಮಾಡಿದವರಿಗೆ ಲಾಕೆಟ್‍ಗಳನ್ನು ವಿತರಿಸಿದೆ. ಬುಕಿಂಗ್ ಸಮಯದಲ್ಲಿ 2,000 ರೂ.ಗಳನ್ನು ಪಾವತಿಸಬೇಕು. ಉಳಿದ ಮೊತ್ತವನ್ನು ಸನ್ನಿಧಾನಂನಲ್ಲಿರುವ ಆಡಳಿತ ಕಚೇರಿಯಲ್ಲಿ ಪಾವತಿಸಿ ಲಾಕೆಟ್‍ಗಳನ್ನು ಪಡೆಯಬಹುದಾಗಿದೆ. 2 ಗ್ರಾಂ, 4 ಗ್ರಾಂ ಮತ್ತು 8 ಗ್ರಾಂ ತೂಕದ ಲಾಕೆಟ್‍ಗಳಿವೆ. ಎರಡು ಗ್ರಾಂ ತೂಕದ ಲಾಕೆಟ್ ಬೆಲೆ ರೂ. 19,300. 4 ಗ್ರಾಂ.ಗೆ 38,600 ಮತ್ತು 8 ಗ್ರಾಂ ತೂಕದ ಲಾಕೆಟ್ ಬೆಲೆ 77,200 ರೂ.ಎಂಬಂತೆ ದರಗಳಿವೆ.





