ಅಹಮದಾಬಾದ್: ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತರಲ್ಲಿ ಒಬ್ಬರಾದ ಸೂರತ್‌ನ ಬ್ಯಾಂಕ್ ಉದ್ಯೋಗಿ ಶೈಲೇಶ್ ಕಲಾಥಿಯಾ ಅವರ ಪತ್ನಿ ಶೀತಲ್ ಕಲಾಥಿಯಾ ಅವರು ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಯಾವುದೇ ಭದ್ರತೆ ಒದಗಿಸದ್ದಕ್ಕಾಗಿ ಸರ್ಕಾರವನ್ನು ಗುರುವಾರ ತರಾಟೆಗೆ ತೆಗೆದುಕೊಂಡರು.
'ಉಗ್ರರ ಗುಂಡಿಗೆ ಬಲಿಯಾದ ಎಲ್ಲಾ ಅಮಾಯಕರಿಗೆ ನ್ಯಾಯ ದೊರೆಯಬೇಕು. ಅಲ್ಲಿ ಪ್ರವಾಸಿಗರಿಗೆ ಪೊಲೀಸರ ಅಥವಾ ಸೇನೆಯ ಭದ್ರತೆ ಇರಲಿಲ್ಲ. ಗಣ್ಯ ವ್ಯಕ್ತಿಗಳಿಗೆ ಭದ್ರತಾ ಸಿಬ್ಬಂದಿಯ ಬೆಂಬಾವಲು ಇರುತ್ತದೆ. ಕೆಲವೊಮ್ಮೆ ಭದ್ರತೆಗಾಗಿ ಅವರ ತಲೆಯ ಮೇಲೆ ಹೆಲಿಕಾಪ್ಟರ್‌ಗಳು ಕೂಡಾ ಹಾರಾಟ ನಡೆಸುತ್ತವೆ. ವಿಐಪಿಗಳ ಭದ್ರತೆಗೆ ಖರ್ಚು ಮಾಡಲು ಆ ಹಣವನ್ನು ನೀವು ಎಲ್ಲಿಂದ ಪಡೆಯುತ್ತೀರಿ?' ಎಂದು ತಮ್ಮ ಪತಿಗೆ ಅಂತಿಮ ನಮನ ಸಲ್ಲಿಸಲು ಬಂದಿದ್ದ ಕೇಂದ್ರ ಸಚಿವ ಸಿ.ಆರ್. ಪಾಟೀಲ್ ವಿರುದ್ಧ ಆಕ್ರೋಶ ಹೊರಹಾಕಿದರು.
'ಗಾಯಗೊಂಡವರಿಗೆ ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿತ್ತು. ಸೇನಾ ಶಿಬಿರದ ಬಳಿ ತೆರಳಿ ತುರ್ತು ಸಹಾಯಕ್ಕಾಗಿ ಅಂಗಾಲಾಚಿದೆ. ಪ್ರಥಮ ಚಿಕಿತ್ಸೆಗೆ ಬೇಕಾಗಿದ್ದ ಕಿಟ್ ಕೂಡ ಅಲ್ಲಿ ಲಭ್ಯವಿರಲಿಲ್ಲ. ಭಯೋತ್ಪಾದಕರು ಮುಸ್ಲಿಮರು ಮತ್ತು ಹಿಂದೂಗಳನ್ನು ಪ್ರತ್ಯೇಕಿಸಿ ಹಿಂದೂ ಪುರುಷರನ್ನು ಕೊಂದರು. ಆ ಸಂದರ್ಭದಲ್ಲಿ ನಮ್ಮ ಸೇನೆ ಏನು ಮಾಡುತ್ತಿತ್ತು? ಕಾಶ್ಮೀರದಲ್ಲಿ ಲಕ್ಷಾಂತರ ಸೈನಿಕರನ್ನು ನಿಯೋಜಿಸಲಾಗಿದೆ. ಆದರೆ ಅಲ್ಲಿ ಯಾರೂ ಇರಲಿಲ್ಲ' ಎಂದು ಸಿಡಿಮಿಡಿಗೊಂಡರು.
ಶೀತಲ್ ಕಲಾಥಿಯಾನೀವು ನಮ್ಮ ವೇತನದಿಂದ ತೆರಿಗೆಯನ್ನು ಕಡಿತಗೊಳಿಸಿದ್ದೀರಿ. ನಾವು ಖರೀದಿಸುವ ಪ್ರತಿಯೊಂದು ವಸ್ತುವಿಗೂ ನಿಮಗೆ ತೆರಿಗೆ ಪಾವತಿಸುತ್ತೇವೆ. ಆದರೆ, ನನ್ನ ಪತಿಗೆ ಭದ್ರತೆಯ ಅಗತ್ಯವಿದ್ದಾಗ, ಅದನ್ನು ನೀಡಲು ನಿಮಗೆ ಸಾಧ್ಯವಾಗಲಿಲ್ಲ. ನಿಮಗೆ ಭದ್ರತೆ ಒದಗಿಸಲು ಆಗದಿದ್ದರೆ, ಆ ಪ್ರವಾಸಿ ತಾಣವನ್ನು ಮುಚ್ಚಿರಿ
ಶೈಲೇಶ್ ಅವರ ಅಂತ್ಯಕ್ರಿಯೆ ಗುರುವಾರ ಸೂರತ್‌ನಲ್ಲಿ ನೆರವೇರಿತು. ಅಲ್ಲಿ ನೆರೆದಿದ್ದ ನೂರಾರು ಮಂದಿಯ ಎದುರೇ ಶೀತಲ್ ಅವರ ಆಕ್ರೋಶದ ಕಟ್ಟೆಯೊಡೆಯಿತು. 'ವಿಐಪಿಗಳಿಗೆ ಭದ್ರತೆ ಸಿಗುತ್ತದೆ. ಆದರೆ ತೆರಿಗೆ ಪಾವತಿಸುವ ಸಾಮಾನ್ಯ ಜನರ ಜೀವಕ್ಕೆ ಬೆಲೆಯಿಲ್ಲವೇ' ಎಂದು ಪ್ರಶ್ನಿಸಿದರು.
'ಯಾವ ರೀತಿಯ ಸರ್ಕಾರ ನಮ್ಮನ್ನು ಆಳುತ್ತಿದೆ? ನೀವು ಕಾಶ್ಮೀರದ ಹೆಸರು ಕೆಡಿಸುತ್ತಿದ್ದೀರಿ. ಆದರೆ, ಸಮಸ್ಯೆ ಕಾಶ್ಮೀರದಲ್ಲ. ಅಲ್ಲಿ ಸೂಕ್ತ ಭದ್ರತೆ ಇಲ್ಲದ್ದೇ ಪ್ರಮುಖ ಸಮಸ್ಯೆಯಾಗಿತ್ತು. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಯಾವುದೇ ಭದ್ರತಾ ಸಿಬ್ಬಂದಿ ಇರಲಿಲ್ಲ' ಎಂದರು.
'ಡಾಕ್ಟರ್ ಮತ್ತು ಎಂಜಿನಿಯರ್ ಆಗಬೇಕೆಂದು ಬಯಸಿರುವ ನನ್ನ ಮಕ್ಕಳ ಭವಿಷ್ಯವೇನು? ನಮ್ಮ ಕುಟುಂಬದ ಆಧಾರಸ್ತಂಭವನ್ನು ಕಳೆದುಕೊಂಡಿದ್ದೇನೆ. ಮಕ್ಕಳನ್ನು ಇನ್ನು ಯಾರು ನೋಡಿಕೊಳ್ಳುವರು?' ಎಂದು ಕಣ್ಣೀರು ಹಾಕಿದರು.

