ಗುವಾಹಟಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಕೃತ್ಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನವನ್ನು ಸಮರ್ಥಿಸಿಕೊಂಡಿದ್ದ ಎಐಯುಡಿಎಫ್ ಶಾಸಕ ಅಮಿನುಲ್ ಇಸ್ಲಾಂ ಅವರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.
ಪಕ್ಷದ ಶಾಸಕರ ಹೇಳಿಕೆ ಕುರಿತು ರಾಜ್ಯದ ವಿರೋಧಪಕ್ಷವಾಗಿರುವ ಎಐಯುಡಿಎಫ್ ಅಂತರ ಕಾಯ್ದುಕೊಂಡಿದೆ.
'ಇದು ಅವರ ವೈಯಕ್ತಿಕ ಹೇಳಿಕೆ, ಪಕ್ಷಕ್ಕೂ ಇದಕ್ಕೂ ಸಂಬಂಧವಿಲ್ಲ' ಎಂದು ಸ್ಪಷ್ಟಪಡಿಸಿದೆ.
'ಪಾಕಿಸ್ತಾನ ಸಮರ್ಥಿಸಿಕೊಂಡಿರುವ ಶಾಸಕರ ವಿಡಿಯೊ ನೋಡಿದ್ದೇವೆ. ಕ್ರಮಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇನೆ. ಶಾಸಕರನ್ನು ಬಂಧಿಸಲಾಗಿದೆ ಎಂದು ಡಿಜಿಪಿ ಮಾಹಿತಿ ನೀಡಿದ್ದಾರೆ' ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದರು.
ನಾಗಾಂವ್ ಜಿಲ್ಲೆಯ ನಿವಾಸದಿಂದ ಶಾಸಕರ ಬಂಧಿಸಲಾಗಿದೆ. ಅವರನ್ನು ಕೋರ್ಟ್‌ಗೆ ಹಾಜರುಪಡಿಸಲಿದ್ದು, ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
'ಶಾಸಕರ ಹೇಳಿಕೆ ದುರದೃಷ್ಟಕರ. ಈ ವಿಷಯದಲ್ಲಿ ನಾವು ಸರ್ಕಾರದ ಜೊತೆಗೆ ಇದ್ದೇವೆ. ಭಯೋತ್ಪಾದನೆಗೆ ಧರ್ಮ ಇಲ್ಲ. ಈ ಉಗ್ರರು ಇಸ್ಲಾಂಗೆ ಕೆಟ್ಟ ಹೆಸರು ತರುತ್ತಿದ್ದಾರೆ' ಎಂದು ಎಐಯುಡಿಎಫ್ ಅಧ್ಯಕ್ಷ ಬದ್ರುದ್ದೀನ್ ಅಜ್ಮಲ್ ಅವರು ಪ್ರತಿಕ್ರಿಯಿಸಿದರು.

