ನವದೆಹಲಿ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ರ್‍ಯಾಗಿಂಗ್, ಲೈಂಗಿಕ ಕಿರುಕುಳ, ಜಾತಿ, ಲಿಂಗ, ಅಂಗವೈಕಲ್ಯ ಆಧಾರಿತ ತಾರತಮ್ಯಕ್ಕೆ ಸಂಬಂಧಿಸಿದ ಕರಡು ನಿಯಮಾವಳಿಯನ್ನು ಅಧಿಸೂಚನೆಯಲ್ಲಿ ಪ್ರಕಟಿಸಲು ವಿಶ್ವವಿದ್ಯಾಲಯ ಅನುದಾನ ಆಯೋಗಕ್ಕೆ (ಯುಜಿಸಿ) ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟೀಶ್ವರ ಸಿಂಗ್ ಅವರು ಇರುವ ವಿಭಾಗೀಯ ಪೀಠವು ಮಾರ್ಚ್ 24ರ ತೀರ್ಪೊಂದನ್ನು ಗಮನಿಸಿತು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳನ್ನು ಪರಿಗಣಿಸಿದ್ದ ಆ ತೀರ್ಪು, ಅಂಥವುಗಳನ್ನು ತಡೆಯಲು ರಾಷ್ಟ್ರೀಯ ಕಾರ್ಯಪಡೆಯೊಂದನ್ನು (ಎನ್‌ಟಿಎಫ್) ರಚಿಸಿದೆ.
'ಈ ಹಿನ್ನೆಲೆಯಲ್ಲಿ, ಯುಜಿಸಿಯು ಕರಡು ನಿಯಮ 2025ನ್ನು ಅಂತಿಮಗೊಳಿಸಿ, ಅದನ್ನು ಅಧಿಸೂಚನೆಯಲ್ಲಿ ಪ್ರಕಟಿಸುವ ಕೆಲಸ ಮಾಡಬಹುದು ಎಂದು ಸ್ಪಷ್ಟಪಡಿಸುತ್ತಿದ್ದೇವೆ' ಎಂದು ಪೀಠವು ಹೇಳಿದೆ.




