HEALTH TIPS

Indus Water Treaty | ನೀರು ತಿರುಗಿಸುವ ಯತ್ನ ಯುದ್ಧಕ್ಕೆ ಸಮ: ಪಾಕಿಸ್ತಾನ

ಇಸ್ಲಾಮಾಬಾದ್: 'ಸಿಂಧೂ ಜಲ ಒಪ್ಪಂದದನ್ವಯ ನದಿ ನೀರನ್ನು ತಿರುಗಿಸಿದ್ದೇ ಆದರೆ ಅದು ಯುದ್ಧಕ್ಕೆ ಸಮವಾದ ಕ್ರಮವಾಗಿದೆ' ಎಂದು ಪಾಕಿಸ್ತಾನ ಗುರುವಾರ ಹೇಳಿದೆ.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕರು ಮೃತಪಟ್ಟಿದ್ದಾರೆ.

ಇದರ ಬೆನ್ನಲ್ಲೇ ಸಿಂಧೂ ನದಿ ಒಪ್ಪಂದ ಅಮಾನತು ಒಳಗೊಂಡಂತೆ ಪಾಕಿಸ್ತಾನದೊಂದಿಗೆ ಎಲ್ಲಾ ರೀತಿಯ ರಾಜತಾಂತ್ರಿಕ ಸಂಬಂಧವನ್ನೂ ಭಾರತ ಕಳಚಿಕೊಂಡಿದೆ.

ಶಿಮ್ಲಾ ಒಪ್ಪಂದ ಅಮಾನತು, ಭಾರತದೊಂದಿಗೆ ವಾಯುಮಾರ್ಗ ಹಂಚಿಕೆ, ವ್ಯಾಪಾರ, ದ್ವಿಪಕ್ಷೀಯ ಸಂಬಂಧ, ವೀಸಾ ರದ್ದು, ಸೇನಾ ವಾಪಸಾತಿ, ವಾಘಾ - ಅಟ್ಟಾರಿ ಗಡಿ ಬಂದ್ ಒಳಗೊಡಂತೆ ಹಲವು ಕಠಿಣ ಕ್ರಮಗಳನ್ನು ಭಾರತ ತೆಗೆದುಕೊಂಡಿದೆ. ಇದರ ಬೆನ್ನಲ್ಲೇ ಪ್ರಧಾನಿ ಶೆಹಬಾಜ್‌ ಶರೀಫ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಭದ್ರತಾ ಸಮಿತಿ ಸಭೆಯ ನಂತರ ಪಾಕಿಸ್ತಾನ ಪ್ರತಿಕ್ರಿಯಿಸಿದೆ.

'ಸಿಂಧೂ ನದಿ ಒಪ್ಪಂದ ಅಮಾನತುಗೊಳಿಸಿದ್ದು ರಾಷ್ಟ್ರದ ಹಿತಕ್ಕೆ ವಿರುದ್ಧವಾದದ್ದು. ಇದು 24 ಕೋಟಿ ಪಾಕಿಸ್ತಾನಿಯರ ಜೀವನಾಡಿಯಾಗಿದೆ. ಯಾವುದೇ ಬೆಲೆ ತೆತ್ತಾದರೂ ನೀರಿನ ಹಕ್ಕುಗಳನ್ನು ರಕ್ಷಿಸಲು ಇಸ್ಮಾಮಾಬಾದ್‌ ಎಲ್ಲಾ ರೀತಿಯ ಹೋರಾಟ ನಡೆಸಲಿದೆ' ಎಂದಿದೆ.

'ಪಾಕಿಸ್ತಾನವು ತಕ್ಷಣದಿಂದಲೇ ವಾಘಾ ಗಡಿಯನ್ನು ಮುಚ್ಚಲಿದೆ. ಶಿಮ್ಲಾ ಒಪ್ಪಂದ ಸಹಿತ ಭಾರತದೊಂದಿಗಿನ ಎಲ್ಲಾ ದ್ವಿಪಕ್ಷೀಯ ಒಪ್ಪಂದಗಳನ್ನು ಪಾಕಿಸ್ತಾನ ಅಮಾನತಿನಲ್ಲಿಡಲಿದೆ. ಪಾಕಿಸ್ತಾನ ಗಡಿ ದಾಟಿದ ಭಾರತೀಯರು ಏ. 30ರೊಳಗೆ ದೇಶ ತೊರೆಯಬೇಕು' ಎಂದು ಪಾಕಿಸ್ತಾನ ಹೇಳಿದೆ.

ಸಿಖ್ ಯಾತ್ರಿಗಳ ಹೊರತುಪಡಿಸಿ ಭಾರತೀಯರಿಗೆ ವಿಸಾ ರದ್ದು

ಸಿಖ್ ಧಾರ್ಮಿಕ ಯಾತ್ರಿಗಳನ್ನು ಹೊರತುಪಡಿಸಿ ಸಾರ್ಕ್‌ ವಿಸಾ ವಿನಾಯಿತಿ ಯೋಜನೆ ಅಡಿಯಲ್ಲಿ ಭಾರತೀಯರಿಗೆ ನೀಡಲಾಗಿದ್ದ ಸೌಲಭ್ಯವನ್ನು ತಕ್ಷಣದಿಂದ ರದ್ದುಪಡಿಸಲು ನಿರ್ಧರಿಸಲಾಗಿದೆ. ಸಿಖ್ ಯಾತ್ರಿಗಳನ್ನು ಹೊರತುಪಡಿಸಿ ಪಾಕಿಸ್ತಾನದಲ್ಲಿರುವ ಭಾರತೀಯರು 48 ಗಂಟೆಯೊಳಗಾಗಿ ದೇಶ ತೊರೆಯಲು ಆದೇಶಿಸಲಾಗಿದೆ.

'ಇಸ್ಲಾಮಾಬಾದ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯ ಸಿಬ್ಬಂದಿ ಗಾತ್ರವನ್ನು 30ಕ್ಕೆ ತಗ್ಗಿಸಲು ಸೂಚಿಸಲಾಗಿದೆ. ಭಾರತೀಯ ವಾಯುಯಾನ ಸಂಸ್ಥೆಗಳಿಗೆ ಪಾಕಿಸ್ತಾನದ ವಾಯು ಪ್ರದೇಶಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ' ಎಂದು ಪಾಕಿಸ್ತಾನ ಹೇಳಿದೆ.

'ಪಾಕಿಸ್ತಾನ ಮತ್ತು ಪಾಕಿಸ್ತಾನ ಮೂಲಕ ಭಾರತದೊಂದಿಗಿನ ಯಾವುದೇ ವ್ಯಾಪಾರವನ್ನು ತಕ್ಷಣದಿಂದ ಅಮಾನತುಗೊಳಿಸಲಾಗಿದೆ.

ಭಯೋತ್ಪಾದನೆ ಖಂಡಿಸಿದ ಪಾಕಿಸ್ತಾನ

'ಯಾವುದೇ ಬಗೆಯ ಭಯೋತ್ಪಾದನೆಯನ್ನು ಪಾಕಿಸ್ತಾನ ಖಂಡಿಸುತ್ತದೆ. ದೇಶವು ಶಾಂತಿಗೆ ಬದ್ಧವಾಗಿದ್ದು, ಸಾರ್ವಭೌಮತ್ವ, ಘನತೆ, ಭದ್ರತೆಯನ್ನು ಕಸಿದುಕೊಳ್ಳಲು ಯಾರಿಗೂ ಅವಕಾಶ ನೀಡದು. ಪಾಕಿಸ್ತಾನದ ಘನತೆಗೆ ಯಾವುದೇ ಧಕ್ಕೆಯಾದಲ್ಲಿ ಮತ್ತು ಇಲ್ಲಿನ ಜನರ ಭದ್ರತೆಗೆ ಅಪಾಯ ಎದುರಾದಲ್ಲಿ ಅದೇ ಮಾದರಿಯ ತಿರುಗೇಟು ನೀಡಲು ಸಿದ್ಧ. ಪಹಲ್ಗಾಮ್‌ ಘಟನೆ ನಂತರ ಇದನ್ನೇ ಆಧಾರವಾಗಿಟ್ಟುಕೊಂಡು ಭಾರತವು ಪ್ರತ್ಯಾರೋಪ ಆಟವನ್ನು, ಸಿನಿಕತನವನ್ನು ಮುಂದುವರಿಸಿದೆ. ಭಾರತದ ಇಂಥ ತಂತ್ರಗಳು ಈ ಪ್ರದೇಶದಲ್ಲಿ ಉದ್ವಿಘ್ನತೆ ಸೃಷ್ಟಿಸಲಿದೆ. ಜತೆಗೆ ಶಾಂತಿ ಮತ್ತು ಸ್ಥಿರತೆಯನ್ನು ಕದಡಲಿದೆ' ಎಂದು ಪಾಕಿಸ್ತಾನ ಹೇಳಿಕೆ ನೀಡಿದೆ.

ಪಹಲ್ಗಾಮ್‌ ದಾಳಿಯ ಹೊಣೆ ಹೊತ್ತಿರುವ ದಿ ರೆಸಿಸ್ಟೆನ್ಸ್ ಫ್ರಂಟ್‌ ಎಂಬುದು ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್‌ ಎ ತಯಬಾ ಸಂಘಟನೆಯ ಅಂಗ ಸಂಸ್ಥೆಯಾಗಿದೆ. ಈ ಘಟನೆ ಖಂಡಿಸಿ ಭಾರತವು ಪಾಕಿಸ್ತಾನದೊಂದಿಗಿನ ರಾಜತಾಂತ್ರಿಕ ಸಂಬಂಧ ಕಡಿದುಕೊಂಡಿತ್ತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries