ಇಸ್ಲಾಮಾಬಾದ್: ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಭಾರತವು ತನ್ನ ವಿರುದ್ಧ ತೆಗೆದುಕೊಂಡಿರುವ ಕ್ರಮಗಳಿಗೆ ಪ್ರತ್ಯುತ್ತರವಾಗಿ ಪಾಕಿಸ್ತಾನ ಕೂಡಾ ಕೆಲವು ಪ್ರತೀಕಾರದ ನಿರ್ಧಾರಗಳನ್ನು ಗುರುವಾರ ಘೋಷಿಸಿದೆ.
ಶಿಮ್ಲಾ ಒಡಂಬಡಿಕೆ ಸೇರಿದಂತೆ ದ್ವಿಪಕ್ಷೀಯ ಒಪ್ಪಂದಗಳನ್ನು ಅಮಾನತಿನಲ್ಲಿರಿಸುವುದು ಹಾಗೂ ಭಾರತದ ಜತೆಗಿನ ಎಲ್ಲ ರೀತಿಯ ವ್ಯಾಪಾರ ಸಂಬಂಧ ಸ್ಥಗಿತಗೊಳಿಸುವುದಾಗಿ ಪ್ರಕಟಿಸಿದೆ.
ಭಾರತ ಸರ್ಕಾರದ ಒಡೆತನದ ಅಥವಾ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಸೇರಿದ ವಿಮಾನಗಳು ಪಾಕಿಸ್ತಾನದ ವಾಯುಪ್ರದೇಶದಲ್ಲಿ ಹಾರಾಟ ನಡೆಸುವುದಕ್ಕೆ ನಿರ್ಬಂಧ ಹೇರಲಾಗಿದೆ. ವಾಘಾ ಗಡಿಯನ್ನು ತಕ್ಷಣದಿಂದಲೇ ಬಂದ್ ಮಾಡಲಾಗುವುದು ಎಂದು ಪಾಕಿಸ್ತಾನ ಹೇಳಿದೆ.
ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಭದ್ರತಾ ಸಮಿತಿ (ಎನ್‌ಎಸ್‌ಸಿ) ತುರ್ತು ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಾಕ್ ಸೇನೆಯ ಮೂರೂ ಪಡೆಗಳ ಮುಖ್ಯಸ್ಥರು, ಸಚಿವರು ಮತ್ತು ಸೇನೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು.
ಏನಿದು ಶಿಮ್ಲಾ ಒಪ್ಪಂದ?
ಭಾರತ ಪಾಕ್ ನಡುವೆ 1972ರಲ್ಲಿ ಶಿಮ್ಲಾ ಒಪ್ಪಂದ ಏರ್ಪಟ್ಟಿತು. 1971ರ ಭಾರತ-ಪಾಕಿಸ್ತಾನ ಯುದ್ಧದ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಸಹಿ ಹಾಕಲಾದ ಮಹತ್ವದ ಶಾಂತಿ ಒಪ್ಪಂದವಾಗಿದೆ. ಭಾರತ-ಪಾಕಿಸ್ತಾನದ ನಡುವೆ ಶಾಂತಿ ಸ್ಥಾಪನೆ ಕುರಿತಂತೆ ಮಾಡಿಕೊಂಡ ಒಪ್ಪಂದವಾಗಿದೆ. ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.
ಗಡಿಯಲ್ಲಿ ಗುಂಡಿನ ದಾಳಿ ನಡೆಸದಿರುವುದು, ಅತಿಕ್ರಮಣ ಹಾಗೂ ಭವಿಷ್ಯದಲ್ಲಿ ಯುದ್ಧ ಮಾಡದಿರವುದು ಈ ಒಪ್ಪಂದದಲ್ಲಿರುವ ಮುಖ್ಯವಾದ ಅಂಶಗಳು.




