ಮಧೂರು : ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ಶ್ರೀದೇವರ ಅನುಗ್ರಹ ಹಾಗೂ ಲಕ್ಷಾಂತರ ಭಕ್ತರ ಸಹಕಾರದೊಂದಿಗೆ ಐತಿಹಾಸಿಕ ಭಕ್ತಿಪುರಸ್ಸರ ಪರ್ವ ಸಂಪನ್ನಗೊಂಡಿರುವುದಾಗಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ತಿಳಿಸಿದ್ದಾರೆ.
ಅವರು ದೇವಾಲಯದಲ್ಲಿ ಕಳೆದ ಮಾ.27 ರಿಂದ ಆರಂಭಗೊಂಡು ನಡೆದ ಅಷ್ಟಬಂಧ ಬ್ರಹ್ಮಕಲಶ-ಮೂಡಪ್ಪ ಸೇವೆಯ ಕೊನೆಯ ದಿನವಾದ ಸೋಮವಾರ ನಡೆದ ಸಮಾರೋಪ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಆರಂಭದಲ್ಲಿ ಹಲವು ಸವಾಲುಗಳನ್ನೊಡ್ಡಿ ಅಷ್ಟೇ ಅಚ್ಚರಿಯಿಂದ ಅದನ್ನು ಅನುಗ್ರಹಪೂರ್ವಕವಾಗಿ ಸಾಂಗವಾಗಿ ನೆರವೇರಲು ಕಾರಣರಾದ ಆ ಸಾನ್ನಿಧ್ಯದ ಮುಂದೆ ನಾವು ತೃಣರೆಂಬ ಭಾವ ಮಾತ್ರ ಇರಲಿ. ಅಹರ್ನಿಶಿ ದುಡಿದ ಕಾರ್ಯಕರ್ತರ ಸಮರ್ಪಣಾ ಭಾವದ ತ್ಯಾಗ, ನಿಶ್ಕಲ್ಮಷ ಕಾರ್ಯನಿರ್ವಹಣೆ ಸ್ತುತ್ಯರ್ಹವಾದುದು. ಸಾಮಾನ್ಯರಿಂದ ತೊಡಗಿ ಮಹಾನ್ ದಾನಿಗಳ ವರೆಗೆ ಎಲ್ಲರೂ ನೀಡಿದ ಆರ್ಥಿಕ, ದ್ಯೆಹಿಕ, ಬೌದ್ಧಿಕ ಬೆಂಬಲಗಳಿಗೆ ಶ್ರೀದೇವರ ಅನುಗ್ರಹ ಸದಾ ಬೆಂಗಾವಲಿಗಿರುತ್ತದೆ. ಮಧೂರು ಅಷ್ಟಬಂಧ ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆಯ ಕಾರ್ಯಕ್ರಮಗಳಲ್ಲಿ ನಗುಮೊಗದ ಎಲ್ಲರ ಸ್ಪಂದನೆ ಇತಿಹಾಸದಲ್ಲಿ ದಾಖಲಾಗುತ್ತದೆ. ಈ ದೌತ್ಯಕ್ಕೆ ನಮ್ಮೆಲ್ಲರನ್ನೂ ಬಡಿದೆಬ್ಬಿಸಿದ ಭಗವಂತನ ಮುಂದೆ ನಾವೆಲ್ಲರೂ ತಲೆತಗ್ಗಿಸಿ ಪ್ರಾರ್ಥಿಸೋಣ ಎಂದರು.
ಧಾರ್ಮಿಕ ಮುಂದಾಳು, ಬ್ರಹ್ಮಕಲಶೋತ್ಸವ ಸಮಿತಿ ಗೌರವ ಉಪಾಧ್ಯಕ್ಷ ಕೆ.ಕೆ.ಶೆಟ್ಟಿ ಕುತ್ತಿಕ್ಕಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದು ರೂ.ನಿಂದ ತೊಡಗಿ ಕೋಟಿ ರೂ. ದೇಣಿಗೆಯಾಗಿ ನೀಡಿದವರೆಲ್ಲರೂ ದೇವರ ಮುಂದೆ ಸಮಾನರು. ದೇವರು ನೀಡಿದ ಪ್ರೇರಣೆಯಿಂದ ಮಧೂರು ಕ್ಷೇತ್ರದಲ್ಲಿ ಜೀರ್ಣೋದ್ಧಾರದಿಂದ ತೊಡಗಿ, ಅದ್ದೂರಿ ಸಮಾರಂಭ ನೆರವೇರಿದೆ. ದೇವಸ್ಥಾನದ ಪಾವಿತ್ರ್ಯ ಕಾಪಾಡುವುದರ ಜತೆಗೆ ಶುಚೀಕರಣಕ್ಕೆ ಅದ್ಯತೆ ನೀಡುವ ಮೂಲಕ ಭಕ್ತಾದಿಗಳನ್ನು ಸೆಳೆಯುವ ಕೆಲಸ ನಡೆಯಬೇಕಾಗಿದೆ. ದೇವಸ್ಥಾನದಲ್ಲಿ ಶುಚೀಕರಣ ವ್ಯವಸ್ಥೆಗೆ ಬೇಕಾದ ಸಹಾಯ ನೀಡಲು ಬದ್ಧನಾಗಿರುವುದಾಗಿ ತಿಳಿಸಿದರು. ಗೌರವ ಉಪಾಧ್ಯಕ್ಷ, ಉದ್ಯಮಿ ಬಿ.ಕೆ.ಮಧೂರು, ಉಪಾಧ್ಯಕ್ಷ ಗಿರೀಶ್ ಸಂಧ್ಯಾ, ಕಾರ್ಯದರ್ಶಿ ಎಂ.ಅಪ್ಪಯ್ಯ ನಾಯ್ಕ್, ಸದಸ್ಯರುಗಳು ಹಾಗೂ ವಿವಿಧ ಸಮಿತಿಗಳ ಅಧ್ಯಕ್ಷರುಗಳಾದ ಸಂತೋಷ್ ಮಧೂರು, ವಿನು, ಕಾರ್ತಿಕ್ ಶೆಟ್ಟಿ, ಪಿ. ರಮೇಶ್, ಮುರಳಿ ಗಟ್ಟಿ, ಕೆ.ಸುರೇಶ್, ಸುರೇಶ್ ಕುದ್ರೆಪ್ಪಾಡಿ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಾಜೇಶ್ ಮಾಸ್ತರ್ ಅಗಲ್ಪಾಡಿ, ಸತ್ಯನಾರಾಯಣ ತಂತ್ರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ನಾರಾಯಣಯ್ಯ ಕೊಲ್ಯ ವಂದಿಸಿದರು.






