ಅಹಮದಾಬಾದ್: 'ಸಿಂಧೂ ನದಿ ನೀರು ನಿಲ್ಲಿಸಿದರೆ ಭಾರತೀಯರ ರಕ್ತ ಹರಿಸುತ್ತೇವೆ' ಎಂದು ಬೆದರಿಕೆ ಹಾಕಿರುವ ಪಾಕಿಸ್ತಾನದ ಬಿಲಾವಲ್ ಭುಟ್ಟೊ ಜರ್ದಾರಿ ಹೇಳಿಕೆಗೆ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ ತಿರುಗೇಟು ನೀಡಿದ್ದಾರೆ. 'ಪಾಕಿಸ್ತಾನದ ರಾಜಕಾರಣಿ ಅರುಚುತ್ತಿದ್ದಾನೆ.
ಅವನಿಗೆ ತಾಕತ್ತು ಇದ್ದರೆ ಭಾರತಕ್ಕೆ ಕಾಲಿಡಲಿ' ಎಂದು ಅವರು ಸವಾಲು ಹಾಕಿದ್ದಾರೆ.
ಸೂರತ್‌ನ ಅಹಿರ್ ಸಮಾಜ ಜಲ ಪಂಚಾಯತ್ ಸಮಿತಿ ಆಯೋಜಿಸಿದ್ದ ಮಳೆನೀರು ಸಂಗ್ರಹ ಕುರಿತ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಸಿಂಧೂ ಜಲ ಒಪ್ಪಂದ ಸ್ಥಗಿತಗೊಳಿಸುವ ಸರ್ಕಾರದ ನಿರ್ಧಾರ ಉಲ್ಲೇಖಿಸಿದ ಪಾಟೀಲ, 'ನದಿಯಲ್ಲಿ ನೀರು ಹರಿಸುವುದನ್ನು ನಿಲ್ಲಿಸಿದರೆ, ಭಾರತದಲ್ಲಿ ರಕ್ತದ ನದಿ ಹರಿಯುತ್ತದೆ ಎಂದು ಬಿಲಾವಲ್ ಹೇಳಿದಾಕ್ಷಣ ನಾವು ಭೀತಿಗೊಳಗಾಗುವ ಜನರೇ? ನಾನು ಆತನಿಗೆ ಹೇಳುತ್ತೇನೆ, ಸಹೋದರ, ನೀವು ಶಾಂತವಾಗಿರಿ. ನಿಮಗೆ ಧೈರ್ಯವಿದ್ದರೆ ಭಾರತಕ್ಕೆ ಬನ್ನಿ. ಇಂತಹ ನಿಮ್ಮ ಗೊಡ್ಡು ಬೆದರಿಕೆಗಳ ಬಗ್ಗೆ ನಾವು ಚಿಂತಿಸದೆ, ನೀರನ್ನು ಉಳಿಸುವ ಸಂರಕ್ಷಿಸುವ ಪ್ರಯತ್ನ ಮುಂದುವರಿಸುತ್ತೇವೆ' ಎಂದು ಹೇಳಿದ್ದಾರೆ.
ನಿನ್ನ ಅಜ್ಜ, ತಾಯಿ ಕೊಂದವರು ಯಾರೆಂದು ಗೊತ್ತಿಲ್ಲವೇ?
ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಕೂಡ ಭುಟ್ಟೊ ಹೇಳಿಕೆಗೆ ಕಿಡಿಕಾರಿದ್ದಾರೆ.
'ತಾನೇನು ಮಾತನಾಡುತ್ತಿರುವೆ ಎನ್ನುವುದು ಗೊತ್ತಿದೆಯೇ? ಇಂತಹ ಬಾಲಿಶ ಹೇಳಿಕೆಗಳನ್ನು ನೀಡುವ ಮೊದಲು ತನ್ನ ತಾಯಿ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಮತ್ತು ತನ್ನ ಅಜ್ಜ ಜುಲ್ಫಿಕರ್ ಅಲಿ ಭುಟ್ಟೊ ಅವರನ್ನು ಕೊಂದವರು ಭಯೋತ್ಪಾದಕರು ಎನ್ನುವುದನ್ನು ಮರೆಯಬೇಡ' ಎಂದು ತಿರುಗೇಟು ನೀಡಿದ್ದಾರೆ.
'ನಿಮಗೆ ಅಮೆರಿಕ ಒಂದಿಷ್ಟು ಕೊಡದಿದ್ದರೆ ನಿಮಗೆ ದೇಶ ನಡೆಸುವ ಶಕ್ತಿಯೇ ಇಲ್ಲ. ಅಂತಹದರಲ್ಲಿ ನೀವು ನಮ್ಮನ್ನು ಕೆಕ್ಕರಿಸಿಕೊಂಡು ನೋಡುತ್ತಿದ್ದೀರಾ' ಎಂದು ಮೂದಲಿಸಿದ್ದಾರೆ.




