ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಈಚೆಗೆ ನಡೆದ ಉಗ್ರರ ದಾಳಿಯನ್ನು ಖಂಡಿಸಿ ದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿ ಎದುರು ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್‌ನ (ಐವೈಸಿ) ಹಲವು ಕಾರ್ಯಕರ್ತರನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.
ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಘಟಕದ ಅಧ್ಯಕ್ಷ ಉದಯ್ ಭಾನು ಛಿಬ್ ಹಾಗೂ ಮಾಧ್ಯಮ ಮೇಲ್ವಿಚಾರಕ ವರುಣ್ ಪಾಂಡೆ ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಹಾಗೂ ಬೆಂಬಲಿಗರು ತೀನ್ ಮೂರ್ತಿ ಚೌಕ್‌ನಿಂದ ಪಾಕಿಸ್ತಾನ ರಾಯಭಾರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪ್ರತಿಭಟನಕಾರರು ಪಾಕಿಸ್ತಾನ ರಾಯಭಾರ ಕಚೇರಿ ತಲುಪುದನ್ನು ತಡೆಯಲು ಪೊಲೀಸರು ಹಾಗೂ ಅರೆಸೇನಾ ಪಡೆಯನ್ನು ನಿಯೋಜಿಸಲಾಗಿತ್ತು. ಆದರೂ ಹಲವು ಬ್ಯಾರಿಕೇಡ್‌ಗಳನ್ನು ದಾಟಿ ಕಚೇರಿ ಆವರಣವನ್ನು ತಲುಪಿದರು. ಅಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದರು.
ಪ್ರತಿಭಟನೆ ವೇಳೆ ಮಾತನಾಡಿದ ಉದಯ್ ಭಾನು 'ಸಮಾಜದಲ್ಲಿ ದ್ವೇಷ ಮತ್ತು ಭಯವನ್ನು ಸೃಷ್ಟಿಸುವ ಉದ್ದೇಶದಿಂದ ನಡೆಸಿರುವ ಪೆಹಲ್ಗಾಮ್ ದಾಳಿಯು ಭಯಾನಕವಾಗಿದೆ. ಭಾರತವು ಪ್ರೀತಿ ಮತ್ತು ಸಹೋದರತ್ವದ ದೇಶವಾಗಿದೆ. ಇಲ್ಲಿ ದ್ವೇಷ ಹಾಗೂ ಭಯೋತ್ಪಾದನೆಗೆ ಜಾಗವಿಲ್ಲ' ಎಂದರು.
ಅಲ್ಲದೇ 'ದಾಳಿ ನಡೆದು ಐದು ದಿನಗಳು ಕಳೆದರೂ ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ' ಎಂದು ಹೇಳಿದರು.
ಮುಗ್ಧ ಜನರನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರತಿಯೊಬ್ಬ ಯುವ ಕಾಂಗ್ರೆಸ್ ಸದಸ್ಯ ಹಾಗೂ ಭಾರತೀಯನು ಸಂತ್ರಸ್ತರಿಗೆ ನ್ಯಾಯ ಕೇಳುತ್ತಿದ್ದಾರೆ. ಭಯೋತ್ಪಾದನೆಗೆ ಬಲವಾದ ಪ್ರತಿಕ್ರಿಯೆನ್ನು ನೀಡಬೇಕು' ಎಂದು ಪ್ರತಿಭಟನಕಾರರೊಬ್ಬರು ಹೇಳಿದರು.




