ಭೋಪಾಲ್: ಮಧ್ಯಪ್ರದೇಶದ ರತ್ಲಂ ಜಿಲ್ಲೆಯ ಕಾರ್ಖಾನೆಯೊಂದರಲ್ಲಿ ಅಮೋನಿಯಾ ಅನಿಲ ಸೋರಿಕೆ ಉಂಟಾದ ಪರಿಣಾಮ ಹಲವರು ಅಸ್ವಸ್ಥಗೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಜಿಲ್ಲೆಯ ಜೋರಾ ಪಟ್ಟಣದಲ್ಲಿ ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದೆ. ಈ ವೇಳೆ ಕಾರ್ಮಿಕರು ಆತಂಕಕ್ಕೆ ಒಳಗಾಗಿದ್ದರು.ಕಾರ್ಮಿಕರನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪೋರ್ವಾಲ್ ಐಸ್ ಕಾರ್ಖಾನೆಯಲ್ಲಿ ಅಮೋನಿಯಾ ಅನಿಲ ಸೋರಿಕೆ ಸಂಭವಿಸಿದೆ. ಈ ಘಟನೆಯಲ್ಲಿ ಅಸ್ವಸ್ಥರಾದ ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಹೇಳಿದ್ದಾರೆ.
ಅಮೋನಿಯಾ ಅನಿಲ ಸೋರಿಕೆಯಾಗಿದೆ ಎಂದು ಅರಿತ ಪೊಲೀಸರು, ಆಡಳಿತ ಮಂಡಳಿ ಮತ್ತು ಅಗ್ನಿಶಾಮಕ ಸಿಬ್ಬಂದಿ ತಕ್ಷಣ ನೀರು ಸಿಂಪಡಿಸುವ ಮೂಲಕ ಅನಿಲ ಸೋರಿಕೆಯನ್ನು ನಿಲ್ಲಿಸಿದರು. ಬಳಿಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು ಎಂದು ಅಮಿತ್ ತಿಳಿಸಿದ್ದಾರೆ.
ಪೊಲೀಸ್ ಠಾಣೆ ಸಮೀಪ ಕಾರ್ಖಾನೆ ಇದ್ದ ಕಾರಣ ಪೊಲೀಸರು ಘಟನೆ ಸಂಭವಿಸಿದ ತಕ್ಷಣ ಸಹಾಯಹಸ್ತ ಚಾಚಿದರು. ಮುಂಜಾಗ್ರತೆ ಕ್ರಮ ವಹಿಸಿದ್ದರಿಂದ ಆಗಬಹುದಾದ ಭಾರೀ ಅನಾಹುತವನ್ನು ತಪ್ಪಿಸಲಾಗಿದೆ ಎಂದು ಅಮಿತ್ ಹೇಳಿದ್ದಾರೆ.




