ನವದೆಹಲಿ: 'ಮನ್ ಕಿ ಬಾತ್' ರೆಡಿಯೊ ಕಾರ್ಯಕ್ರಮದ 121ನೇ ಸಂಚಿಕೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಸೇರಿದಂತೆ ಅನೇಕ ವಿಷಯಗಳ ಕುರಿತು ಪ್ರಸ್ತಾಪಿಸಿದ್ದಾರೆ.
ಉಗ್ರರಿಗೆ ಶಿಕ್ಷೆ: ಪುನರುಚ್ಛರಿಸಿದ ಮೋದಿ...
'ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ನನ್ನ ಹೃದಯದಲ್ಲಿ ಆಳವಾದ ನೋವನ್ನುಂಟು ಮಾಡಿದೆ. ಈ ದಾಳಿಯು ಪ್ರತಿಯೊಬ್ಬ ನಾಗರಿಕರನನ್ನೂ ಎದೆಗುಂದಿಸಿದೆ. ದಾಳಿಯಲ್ಲಿ ಮೃತಪಟ್ಟ ಪ್ರತಿಯೊಬ್ಬ ಭಾರತೀಯನ ಪರ ಇಡೀ ದೇಶವೇ ನಿಂತಿದೆ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
'ಕಾಶ್ಮೀರವನ್ನು ನಾಶ ಮಾಡುವುದೇ ಭಯೋತ್ಪಾದಕರ ಗುರಿಯಾಗಿದೆ. ಅದಕ್ಕಾಗಿಯೇ ಇಷ್ಟು ದೊಡ್ಡ ಸಂಚು ರೂಪಿಸಲಾಯಿತು. ಉಗ್ರರಿಗೆ ತಕ್ಕ ಉತ್ತರ ನೀಡಲಾಗುವುದು. ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಿಗೆ ನ್ಯಾಯ ಒದಗಿಸಲಾಗುವುದು' ಎಂದು ಪ್ರಧಾನಿ ಮೋದಿ ಮತ್ತೊಮ್ಮೆ ಶಪಥ ಮಾಡಿದ್ದಾರೆ.
'ಭಾರತೀಯರ ಆಕ್ರೋಶ ಇಡೀ ವಿಶ್ವದಲ್ಲೇ ಪ್ರತಿಫಲಿಸುತ್ತಿದೆ. ಜಗತ್ತಿನ ಎಲ್ಲ ಕಡೆಗಳಿಂದಲೂ ಸಂತಾಪ ವ್ಯಕ್ತವಾಗಿದೆ. ಜಾಗತಿಕ ನಾಯಕರು ಉಗ್ರರ ದಾಳಿಯನ್ನು ಖಂಡಿಸಿದ್ದಾರೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಇಡೀ ಜಗತ್ತು 140 ಕೋಟಿ ಭಾರತೀಯರ ಜೊತೆಗಿದೆ. ದಾಳಿಯಲ್ಲಿ ಮೃತಪಟ್ಟವರಿಗೆ ನ್ಯಾಯ ಸಿಗಲಿದೆ ಎಂದು ನಾನು ವಾಗ್ದಾನ ನೀಡುತ್ತೇನೆ. ಈ ಕೃತ್ಯದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆಯನ್ನು ನೀಡಲಾಗುವುದು' ಎಂದು ಅವರು ಹೇಳಿದ್ದಾರೆ.
'ಭಯೋತ್ಪಾದನೆಯ ವಿರುದ್ಧದ ಈ ಹೋರಾಟದಲ್ಲಿ ದೇಶದ ಏಕತೆ ನಮ್ಮ ದೊಡ್ಡ ಶಕ್ತಿಯಾಗಿದೆ. 140 ಕೋಟಿ ಭಾರತೀಯರ ಏಕತೆಯೇ ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟದಲ್ಲಿ ಆಧಾರವಾಗಿದೆ. ಈ ಸವಾಲನ್ನು ಎದುರಿಸುವ ನಮ್ಮ ದೃಢಸಂಕಲ್ಪವನ್ನು ಬಲಪಡಿಸಿಕೊಳ್ಳಬೇಕು. ಒಂದು ದೇಶವಾಗಿ ಬಲವಾದ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು. ಇಡೀ ರಾಷ್ಟ್ರವೇ ಒಂದೇ ಧ್ವನಿಯಲ್ಲಿ ಹೇಗೆ ಪ್ರತಿಕ್ರಿಯಿಸುತ್ತಿದೆ ಎಂಬುದನ್ನು ಇಡೀ ಜಗತ್ತೇ ಗಮನಿಸುತ್ತಿದೆ' ಎಂದು ಹೇಳಿದ್ದಾರೆ.
'ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯು ಭಯೋತ್ಪಾದನೆಯನ್ನು ಪೋಷಿಸುವವರ ಹತಾಶೆಯನ್ನು ಬಿಂಬಿಸುತ್ತದೆ. ಅವರ ಹೇಡಿತನವನ್ನು ತೋರಿಸುತ್ತದೆ. ಜಮ್ಮು ಮತ್ತು ಕಾಶ್ಮೀರದ ಸಮಗ್ರ ಪ್ರಗತಿಯು ಶತ್ರುಗಳಿಗೆ ಸಹಿಸಲಾಗುತ್ತಿಲ್ಲ. ಕಾಶ್ಮೀರದಲ್ಲಿ ಶಾಂತಿ ಮರಳುತ್ತಿದ್ದು, ಶಾಲೆ, ಕಾಲೇಜು ಶುರುವಾಗಿ ಪ್ರಜಾಪ್ರಭುತ್ವ ಬಲಗೊಳ್ಳುತ್ತಿದೆ. ಪ್ರವಾಸೋದ್ಯಮ ಚೇತರಿಕೆ ಕಂಡು ಯುವಜನತೆಗೆ ಉದ್ಯೋಗವಕಾಶಗಳು ಸೃಷ್ಟಿಯಾಗಿದ್ದವು. ಆದರೆ ಶತ್ರುಗಳು ಇದನ್ನು ನಾಶ ಮಾಡಲು ಯತ್ನಿಸುತ್ತಿದ್ದಾರೆ' ಎಂದು ಅವರು ಉಲ್ಲೇಖಿಸಿದ್ದಾರೆ.
ಕಸ್ತೂರಿ ರಂಗನ್ ಕೊಡುಗೆಗಳು ಸದಾ ಸ್ಮರಣೀಯ...
ಇದೇ ಸಂದರ್ಭದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮಾಜಿ ಅಧ್ಯಕ್ಷ, ವಿಜ್ಞಾನಿ ಕೆ.ಕಸ್ತೂರಿ ರಂಗನ್ ನಿಧನದ ಹಿನ್ನೆಲೆಯಲ್ಲಿ ಅವರ ಸಾಧನೆಗಳನ್ನು ಪ್ರಧಾನಿ ಮೋದಿ ಮೆಲುಕು ಹಾಕಿದ್ದಾರೆ.
'ಕಸ್ತೂರಿ ರಂಗನ್ ಅವರನ್ನು ಭೇಟಿಯಾದಾಗೆಲ್ಲ ದೇಶದ ಯುವಜನತೆ, ಪ್ರತಿಭೆ, ಆಧುನಿಕ ಶಿಕ್ಷಣ, ಬಾಹ್ಯಾಕಾಶ ಮತ್ತು ವಿಜ್ಞಾನದ ಕುರಿತು ಚರ್ಚಿಸುತ್ತಿದ್ದೆ. ದೇಶದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಅವರು ನೀಡಿದ ಕೊಡುಗೆಯನ್ನು ಸದಾ ಸ್ಮರಿಸುತ್ತೇವೆ' ಎಂದು ಪ್ರಧಾನಿ ಹೇಳಿದ್ದಾರೆ.
'ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವಲ್ಲಿ ಕಸ್ತೂರಿ ರಂಗನ್ ಮಹತ್ವದ ಪಾತ್ರ ವಹಿಸಿದ್ದರು. ದೇಶಕ್ಕೆ ಅವರ ನಿಸ್ವಾರ್ಥ ಸೇವೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ನೀಡಿದ ಕೊಡುಗೆಗಳು ಸ್ಮರಣೀಯ. ಅವರಿಗೆ ನನ್ನ ನಮನಗಳು' ಎಂದು ಪ್ರಧಾನಿ ಸಂತಾಪ ಸೂಚಿಸಿದ್ದಾರೆ.
ಜಾಗತಿಕ ಬಾಹ್ಯಾಕಾಶ ಶಕ್ತಿ...
'ಭಾರತ ಈಗ ಜಾಗತಿಕ ಬಾಹ್ಯಾಕಾಶ ಶಕ್ತಿಯಾಗಿ ಬೆಳೆದಿದೆ. ಒಂದೇ ಕಾರ್ಯಾಚರಣೆಯಲ್ಲಿ 104 ಉಪ್ರಗಹಗಳನ್ನು ಉಡ್ಡಯನ ಮಾಡುವ ಮೂಲಕ ದಾಖಲೆ ಬರೆದಿದ್ದೇವೆ. ಭಾರತ ಚಂದ್ರನ ದಕ್ಷಿಣ ಧ್ರುವ ತಲುಪಿದ ಮೊದಲ ದೇಶವಾಗಿದೆ. ಮಂಗಳ ಕಕ್ಷೆಯ ಯೋಜನೆಯನ್ನು ಪ್ರಾರಂಭಿಸಿದ್ದೇವೆ' ಎಂದು ಪ್ರಧಾನಿ ಹೇಳಿದ್ದಾರೆ.
'ಆಪರೇಷನ್ ಬ್ರಹ್ಮ'
ಮ್ಯಾನ್ಮಾರ್‌ನಲ್ಲಿ ನಡೆದ ಭೀಕರ ಭೂಕಂಪದ ಸಂದರ್ಭದಲ್ಲಿ ನೆರವಿನ ಹಸ್ತ ಚಾಚಿರುವ ಕುರಿತಾಗಿಯೂ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ.
'ಮ್ಯಾನ್ಮಾರ್ ಭೂಕಂಪದಲ್ಲಿ ಅಪಾರ ನಾಶ-ನಷ್ಟ ಉಂಟಾಗಿದೆ. ಸಂತ್ರಸ್ತರಿಗೆ ನೆರವಿಗಾಗಿ ಭಾರತವು 'ಆಪರೇಷನ್ ಬ್ರಹ್ಮ' ಕಾರ್ಯಾಚರಣೆಯನ್ನು ಆರಂಭಿಸಿತು. ಆಪರೇಷನ್ ಬ್ರಹ್ಮದಲ್ಲಿ ಭಾಗಿಯಾದ ಎಲ್ಲರ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ. ಮಾವನೀಯತೆಗೆ ಸೇವೆ ಸಲ್ಲಿಸುವ ವಿಷಯ ಬಂದಾಗ ಭಾರತ ಸದಾ ಮುಂಚೂಣಿಯಲ್ಲಿದೆ ಮತ್ತು ಸದಾ ಇರುತ್ತದೆ' ಎಂದು ಅವರು ಹೇಳಿದ್ದಾರೆ.




