ಬುಲಂದ್‌ಶಹರ್: 'ನಾನು ಇಸ್ಲಾಮಾಬಾದ್‌ನವಳು. ಭಾರತದವನನ್ನು ಮದುವೆಯಾಗಿದ್ದೇನೆ. ನನ್ನ ದೇಶ ಬಿಟ್ಟು ನಾನು ಇಲ್ಲಿಗೆ ಬಂದಿದ್ದೇನೆ. ಈಗ ಭಾರತವೇ ನನ್ನ ದೇಶ. ವಾಪಸು ಹೋಗಲು ನನಗೆ ಇಷ್ಟವಿಲ್ಲ. ಇಲ್ಲೇ ಇರಲು ಅವಕಾಶ ಕೊಡಿ' ಎಂದು ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ಮರಿಯಂ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
'ಗಂಡ ಎಲ್ಲಿರುತ್ತಾರೊ ಅದೇ ನನ್ನ ಮನೆ. ಅವರ ಜೊತೆಯಲ್ಲಿಯೇ ಇರಲು ಅವಕಾಶ ಮಾಡಿಕೊಡಿ' ಎಂದೂ ಅವರು ಕೇಳಿಕೊಂಡಿದ್ದಾರೆ. ಮರಿಯಂ ಅವರು ಮೂರು ವರ್ಷಗಳ ಹಿಂದೆ ಜಿಲ್ಲೆಯ ಖುರ್ಜ್ ಪ್ರದೇಶದ ಅಮಿರ್ ಎನ್ನುವರನ್ನು ವರಿಸಿದ್ದರು. ಎರಡು ತಿಂಗಳ ಹಿಂದಷ್ಟೆ ಅವರಿಗೆ ಅಲ್ಪಾವಧಿ ವೀಸಾ ದೊರಕಿತ್ತು. ದೀರ್ಘಾವಧಿ ವೀಸಾ ನೀಡುವಂತೆಯೂ ಅವರು ಅರ್ಜಿ ಸಲ್ಲಿಸಿದ್ದರು.
'ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಬಗ್ಗೆ ನನಗೆ ತೀವ್ರ ದುಃಖವಾಗಿದೆ. ಈ ದಾಳಿ ನಡೆಸಿದವರನ್ನು ಶಿಕ್ಷಿಸಿ' ಎಂದು ಮರಿಯಂ ಹೇಳಿದರು.
ಸರ್ಕಾರ ಹೇಳುವುದೇನು
'ಮರಿಯಂ ಅವರು ಅರ್ಜಿ ಸಲ್ಲಿಸಿದ್ದಾರೆ. ನಮ್ಮ ಮೇಲಾಧಿಕಾರಿಗಳ ಸೂಚನೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು' ಎಂದು ಪೊಲೀಸ್ ವರಿಷ್ಠಾಧಿಕಾರಿ ತೇಜ್‌ವೀರ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಪೊಲೀಸರ ಪ್ರಕಾರ ಇದೇ ಜಿಲ್ಲೆಯಲ್ಲಿ ಒಟ್ಟು ನಾಲ್ವರು ಮಹಿಳೆಯರ ಬಳಿ ಅಲ್ಪಾವಧಿ ವೀಸಾ ಇತ್ತು. ಈ ಪೈಕಿ ಮೂವರನ್ನು ವಾಪಸು ಕಳುಹಿಸಲಾಗಿದೆ. ಮರಿಯಂ ಕೊನೆಯವರು.
ನಿಖರ ಮಾಹಿತಿ ನೀಡಿಲ್ಲ
ಕೇಂದ್ರ ಸರ್ಕಾರದ ಆದೇಶದ ಮೇರೆಗೆ ತನ್ನ ರಾಜ್ಯದಲ್ಲಿ ಇರುವ ಎಲ್ಲ ಪಾಕಿಸ್ತಾನಿ ಪ್ರಜೆಗಳನ್ನು (ಒಬ್ಬರನ್ನು ಹೊರತುಪಡಿಸಿ) ವಾಪಸು ಕಳುಹಿಸಿರುವ ರಾಜ್ಯ ನಮ್ಮದು' ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿಕೊಂಡಿದೆ. ಆದರೆ, ರಾಜ್ಯದಲ್ಲಿ ಎಷ್ಟು ಮಂದಿ ಪಾಕ್ ಪ್ರಜೆಗಳು ಇದ್ದರು, ಎಷ್ಟು ಜನರನ್ನು ವಾಪಸು ಕಳುಹಿಸಲಾಗಿದೆ ಎಂಬ ನಿಖರ ಮಾಹಿತಿಯನ್ನು ರಾಜ್ಯ ಸರ್ಕಾರ ಬಹಿರಂಗಪಡಿಸಿಲ್ಲ.
ಬಾಕಿ ಉಳಿದಿರುವ ಪಾಕ್ ಪ್ರಜೆ ಮರಿಯಂ ಅವರೇ ಎಂಬುದನ್ನು ಸರ್ಕಾರ ಖಚಿತವಾಗಿ ಹೇಳಿಲ್ಲ.




