ನವದೆಹಲಿ: ಯಾವುದೇ ಸಂಘಟನೆಯನ್ನು ನಿರ್ಲಕ್ಷಿಸಿದರೆ ಅದರ ಗುಣಲಕ್ಷಣ ಮತ್ತು ಗುರಿ ಬದಲಾಗುವ ಸಾಧ್ಯತೆಗಳಿವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಮಂಗಳವಾರ ಅಭಿಪ್ರಾಯಪಟ್ಟಿದ್ದಾರೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ನೂತನ ಕಟ್ಟಡ 'ಯಶವಂತ್' (ಎಬಿವಿಪಿಯ ಮೊದಲ ಸಂಘಟನಾಕಾರ ಯಶವಂತರಾವ್ ಕೇಲ್ಕರ್ ಅವರ ಸ್ಮರಣಾರ್ಥ) ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಅವರು ಮಾತನಾಡಿದರು.
'ಸಂಘಟನೆ ಚಿಕ್ಕದಾಗಿದ್ದರೆ, ಕನಿಷ್ಠ ಮೂಲಸೌಕರ್ಯದಲ್ಲೇ ಅದು ಕಾರ್ಯನಿರ್ವಹಿಸುತ್ತದೆ. ಸಂಘಟನೆ ಬೆಳೆದಂತೆಲ್ಲಾ ಹೆಚ್ಚಿನ ಮೂಲಸೌಕರ್ಯ ಬೇಕು. ಅದು ದೇಶದ ಆತ್ಮದೊಂದಿಗೆ ಬೆರೆತಾಗ, ಅದಕ್ಕೆ ಹಲವು ಬಗೆಯ ಮೂಲಸೌಕರ್ಯಗಳ ಅಗತ್ಯವಿರುತ್ತದೆ. ಹೀಗೆ ಪ್ರತಿಯೊಂದು ಸಂಸ್ಥೆಗೂ ತನ್ನದೇ ಆದ ಆತ್ಮ ಮತ್ತು ರಚನೆ ಇರುತ್ತದೆ' ಎಂದಿದ್ದಾರೆ.
'ಒಂದೊಮ್ಮೆ ಸಂಘಟನೆಯ ಬಾಹ್ಯ ರಚನೆ ಉತ್ತಮವಾಗಿಲ್ಲದಿದ್ದರೆ ಅದು ನಿರ್ಲಕ್ಷ್ಯಕ್ಕೆ ಒಳಗಾಗಲಿದೆ. ಅದು ಬೆಳವಣಿಗೆಯ ಹಾದಿಯಲ್ಲಿದ್ದರೆ ಎಲ್ಲರನ್ನೂ ಆಕರ್ಷಿಸಲಿದೆ. ಸಂಘಟನೆಗಳು ನಿರ್ಲಕ್ಷ್ಯಕ್ಕೊಳಗಾದರೆ ಆಗ ಅದರ ಗುಣಲಕ್ಷಣ ಮತ್ತು ಗುರಿಯನ್ನು ಕಳೆದುಕೊಳ್ಳಲಿದೆ' ಎಂದು ಭಾಗವತ್ ಹೇಳಿದ್ದಾರೆ.
'ಸಂಘಟನೆಯಲ್ಲಿ ಸಮತೋಲನ ಇರಬೇಕು. ಅದರ ಸದಸ್ಯರು ಮಧ್ಯಮ ಹಾದಿಯಲ್ಲಿ ಸಾಗಬೇಕು. ಇವೆಲ್ಲವೂ ಜಾಗರೂಕ ಮತ್ತು ಬದ್ಧತೆಯ ಕಾರ್ಯಕರ್ತರು ಇದ್ದಾಗ ಮಾತ್ರ ಇವೆಲ್ಲಾ ಸಾಧ್ಯ' ಎಂದಿದ್ದಾರೆ.
'ಸದ್ಯದ ಪರಿಸ್ಥಿತಿಯಲ್ಲಿ ಸೂಕ್ತ ಮಾರ್ಗದರ್ಶನಕ್ಕಾಗಿ ಇಡೀ ಜಗತ್ತೇ ಭಾರತದತ್ತ ನೋಡುತ್ತಿದೆ. ದೇಶದ ದಿಸೆಯೇ ಬದಲಾಗುತ್ತಿದೆ. ಹೀಗಾಗಿ ಜಗತ್ತಿನ ಹಿತಕ್ಕಾಗಿ ಸರಿಯಾದದ್ದನ್ನು ಪ್ರಸ್ತುತಪಡಿಸುವುದು ನಮ್ಮ ಕರ್ತವ್ಯವಾಗಿದೆ. ನಮ್ಮ ಬಳಿ ಜ್ಞಾನವಿದೆ. ಏಕತೆಯನ್ನು ಅಳವಡಿಸಿಕೊಂಡು ಮುನ್ನಡೆಯಬೇಕು. ವಿವಿಧ ಪಂಗಡ, ಜಾತಿ, ಉಪಜಾತಿ, ಭಾಷೆಗಳನ್ನು ಮೀರಿದಾಗ ಮಾತ್ರ ದೇಶ ನಿರ್ಮಾಣ ಸಾಧ್ಯ' ಎಂದು ಹೇಳಿದ್ದಾರೆ.
'ಯುವಸಮುದಾಯದಲ್ಲಿ ಹೊಸ ಉತ್ಸಾಹವನ್ನು ಕಂಡಿದ್ದೇನೆ. ಅವರು ಖಂಡಿತವಾಗಿಯೂ ಭಾರತವನ್ನು ಮುಂಚೂಣಿಯ ರಾಷ್ಟ್ರವನ್ನಾಗಿಸಲಿದ್ದಾರೆ ಎಂಬ ಭರವಸೆ ಇದೆ' ಎಂದು ಭಾಗವತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ವಸಾಹತುಶಾಹಿ ಮನಸ್ಥಿತಿಯಿಂದ ಹೊರಬಂದು ಈ ದೇಶದ ಭವಿಷ್ಯವನ್ನು ನಿರ್ಮಿಸಬೇಕಿದೆ. ಈ ನಿಟ್ಟಿನಲ್ಲಿ ದುಡಿಯುವ ಮನಸ್ಸುಳ್ಳ ಯುವ ಸಮುದಾಯಕ್ಕೆ ಸರಿಯಾದ ಜ್ಞಾನ ಮತ್ತು ಮಾರ್ಗದರ್ಶನ ನೀಡಬೇಕು. ಅದು ಏಕತೆಯಿಂದ ಸಾಧ್ಯವಾಗಲಿದೆ' ಎಂದು ಭಾಗವತ್ ಹೇಳಿದ್ದಾರೆ.




