HEALTH TIPS

TTD: ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್‌ ನ್ಯೂಸ್! ವಾಟ್ಸಾಪ್‌ ಮೂಲಕವೇ ದರ್ಶನ ಟಿಕೆಟ್‌ ಬುಕಿಂಗ್‌

ಹೈದರಾಬಾದ್: ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Andhra Pradesh Chief Minister Chandrababu Naidu) ಅವರ ಇತ್ತೀಚಿನ ತಿರುಮಲ ಭೇಟಿಯ ನಂತರ, ತಿರುಮಲ ತಿರುಪತಿ ದೇವಸ್ಥಾನವು (ಟಿಟಿಡಿ)(TTD) ಭಕ್ತರಿಗೆ ಅನುಕೂಲವಾಗಲೆಂದು ಹೊಸ ಆಧುನಿಕ ಬದಲಾವಣೆಗಳನ್ನು ಜಾರಿಗೆ ತಂದಿದೆ.

ಭಕ್ತರ ತೀರ್ಥಯಾತ್ರೆಯ ಅನುಭವ ಹೆಚ್ಚಿಸಲು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಾಟ್ಸಾಪ್‌ನಲ್ಲಿ ಒಂದು ಮೆಸೇಜ್‌ ಕಳುಹಿಸುವ ಮೂಲಕ ಭಕ್ತರು ವಿವಿಧ ಸೇವೆಗಳನ್ನು ಬುಕಿಂಗ್‌ ಮಾಡಬಹುದಾಗಿದೆ. ಟಿಟಿಡಿ ಆಡಳಿತ ಮಂಡಳಿ ಮತ್ತು ಅಮರಾವತಿಯಲ್ಲಿ ಅಧಿಕಾರಿಗಳೊಂದಿಗೆ ನಡೆದ ಪರಿಶೀಲನಾ ಸಭೆಯಲ್ಲಿ, ಭಕ್ತರಿಗೆ ಸುವ್ಯವಸ್ಥಿತ ಟಿಕೆಟ್ ಬುಕಿಂಗ್, ವಸತಿ ಹಂಚಿಕೆ ಮತ್ತು ದೇವಾಲಯದ ಚಟುವಟಿಕೆಗಳ ನವೀಕರಣ ಸೇರಿದಂತೆ ಇತರೆ ಸೌಲಭ್ಯಗಳನ್ನು ಸುಧಾರಿಸುವ ಅಗತ್ಯವನ್ನು ಸಿಎಂ ಚಂದ್ರಬಾಬು ನಾಯ್ಡು ಪ್ರಸ್ತಾಪಿಸಿದ್ದರು. ಈ ಸಭೆಯ ಮುಂದುವರಿದ ಭಾಗವಾಗಿ ಟಿಟಿಡಿ ವಾಟ್ಸಾಪ್ ಆಧಾರಿತ ಸೇವೆ(WhatsApp-Based Services)ಗಳನ್ನು ಪ್ರಾರಂಭಿಸುತ್ತಿದೆ. ಇದು ಆಂಧ್ರ ಪ್ರದೇಶದ ಇ-ಆಡಳಿತ ಕಾರ್ಯತಂತ್ರಕ್ಕೂ ಹೊಂದಿಕೆಯಾಗುವ ಯೋಜನೆಯಾಗಿದೆ.

"ಟಿಟಿಡಿ ವಾಟ್ಸಾಪ್ ಮೂಲಕ 15 ಸೇವೆಗಳನ್ನು ನೀಡಲಿದೆ. ನಾವು ವಿವರಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದೇವೆ ಮತ್ತು ಅವರು ಅದಕ್ಕೆ ಅನುಗುಣವಾಗಿ ಆಯ್ಕೆಗಳನ್ನು ಅಪ್‌ಡೇಟ್‌ ಮಾಡಲಿದ್ದಾರೆ. ಟಿಕೆಟ್ ಬುಕಿಂಗ್, ವಸತಿ ಮತ್ತು ಇತರ ಸೇವೆಗಳನ್ನು ಪಡೆಯಲು ಭಕ್ತರು ಗಂಟೆಗಟ್ಟಲೆ ಕಾಯುವ ಬದಲು, ಅವರ ಸಮಯವನ್ನು ಉಳಿತಾಯ ಮಾಡುವುದು ನಮ್ಮ ಗುರಿಯಾಗಿದೆ. ಭಕ್ತರು ಟಿಟಿಡಿ ವೆಬ್‌ಸೈಟ್ ಮೂಲಕವೂ ನೇರವಾಗಿ ಸೇವೆಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ" ಎಂದು ಟಿಟಿಡಿಯ ಐಟಿ ವಿಭಾಗದ ಉಪ ಮಹಾನಿರ್ದೇಶಕ ವೆಂಕಟೇಶ್ವರಲು ನಾಯ್ಡು ಹೇಳಿದ್ದಾರೆ.

WhatsApp ನಲ್ಲಿ TTD ಸೇವೆಗಳನ್ನು ಪಡೆಯುವುದು ಹೇಗೆ?

ಅತ್ಯಂತ ಸುಲಭವಾಗಿ ವಾಟ್ಸಾಪ್‌ ಮೂಲಕ ಟಿಟಿಡಿಯ ಸೇವೆಗಳನ್ನು ಪಡೆಯಬಹುದಾಗಿದೆ. ಇದಕ್ಕಾಗಿ ಮೊದಲು ಭಕ್ತರು ತಮ್ಮ ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿ 9552300009 ನಂಬರ್‌ ಅನ್ನು ಸೇವ್‌ ಮಾಡಬೇಕು. ನಂತರ ವಾಟ್ಸಾಪ್‌ನಲ್ಲಿ ಈ ಸಂಖ್ಯೆಯನ್ನು ತೆರೆದು ʼHi' ಎಂಬ ಸರಳ ಮೆಸೇಜ್‌ ಕಳುಹಿಸಿದರೆ, ರಾಜ್ಯ ಸರ್ಕಾರಿ ನಾಗರಿಕ ಸಹಾಯಕರೊಂದಿಗೆ ನಿಮ್ಮ ಚಾಟ್‌ ತೆರೆದುಕೊಳ್ಳುತ್ತದೆ.

ನೀವು Hi ಎಂದು ಮೆಸೇಜ್‌ ಕಳುಹಿಸಿ ತಕ್ಷಣ, "ಆಂಧ್ರ ಪ್ರದೇಶ ಸರ್ಕಾರಿ ನಾಗರಿಕ ಸಹಾಯಕ ಸೇವೆಗೆ ಸ್ವಾಗತ. ನಿಮ್ಮ ಅನುಕೂಲತೆ ನಮ್ಮ ಆದ್ಯತೆಯಾಗಿದೆ. ದಯವಿಟ್ಟು ನಿಮಗೆ ಅಗತ್ಯವಿರುವ ನಾಗರಿಕ ಸೇವೆಯನ್ನು ಆಯ್ಕೆಮಾಡಿ" ಎಂಬ ಸಂದೇಶ ನಿಮಗೆ ಕಾಣಿಸುತ್ತದೆ.

ಇದರ ನಂತರ "ಸೇವೆಗಳನ್ನು ಆಯ್ಕೆ ಮಾಡಿ" ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು ಮತ್ತು ಅದರಲ್ಲಿ ಕಾಣಿಸುವ ಪಟ್ಟಿಯಲ್ಲಿ "TTD ದೇವಾಲಯ ಸೇವೆಗಳು" ಎಂಬ ಆಯ್ಕೆಯ ಮೇಲೆ ಕ್ಲಿಕ್‌ ಮಾಡಬೇಕು.

ಇಲ್ಲಿ ನಿಮಗೆ ನಾಲ್ಕು ಆಯ್ಕೆಗಳನ್ನು ತೋರಿಸಲಾಗುತ್ತದೆ.

  • ಸ್ಲಾಟೆಡ್ ಸರ್ವದರ್ಶನ ಲೈವ್ ಸ್ಟೇಟಸ್
  • ಸರ್ವದರ್ಶನ ಲೈವ್ ಸ್ಟೇಟಸ್
  • ಶ್ರೀ ವಾಣಿ ಟ್ರಸ್ಟ್ ಲೈವ್ ಸ್ಟೇಟಸ್
  • ಮುಂಗಡ ಠೇವಣಿ ಮರುಪಾವತಿ ಲೈವ್ ಸ್ಟೇಟಸ್‌
  • ಇಲ್ಲಿ ನಿಮಗೆ ಯಾವ ಸೇವೆ ಬೇಕೋ ಅದರ ಮೇಲೆ ಕ್ಲಿಕ್‌ ಮಾಡಿದರೆ, ಆ ಸೇವೆ ನಿಮಗಾಗಿ ತೆರೆದುಕೊಳ್ಳುತ್ತದೆ.

ಇನ್ನೂ ಹಲವು ಸೇವೆಗಳು ಸೇರಲಿವೆ:

ಸದ್ಯಕ್ಕೆ ವಾಟ್ಸಾಪ್‌ನಲ್ಲಿ ನಿಯಮಿತ ಸೇವೆಗಳು ಮಾತ್ರ ಲಭ್ಯವಿದ್ದು, ದೇಣಿಗೆ ಸೇರಿದಂತೆ ದೇವಾಲಯ ನೀಡುವ ಇತರ ಸೇವೆಗಳನ್ನು ಮುಂದಿನ ದಿನಗಳಲ್ಲಿ ಅಪ್‌ಡೇಟ್‌ ಮಾಡಲು ಟಿಟಿಡಿ ನಿರ್ಧರಿಸಿದೆ. ಇದರಿಂದಾಗಿ ದೇವಾಲಯದ ನಿರ್ವಹಣೆ ಇನ್ನಷ್ಟು ಆಧುನೀಕೃತವಾಗಲಿದ್ದು, ಭಕ್ತರಿಗೂ ಅನುಕೂಲವಾಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries