ನವದೆಹಲಿ: 'ಅಮೆರಿಕದ ವಸ್ತುಗಳಿಗೆ ವಿಧಿಸುತ್ತಿದ್ದ ಸುಂಕವನ್ನು ಶೇ 100ರಷ್ಟು ಕಡಿತ ಮಾಡಲು ಭಾರತ ಸರ್ಕಾರ ಒಪ್ಪಿಕೊಂಡಿದ್ದು, ಶೀಘ್ರದಲ್ಲಿ ವಾಷಿಂಗ್ಟನ್ ಮತ್ತು ನವದೆಹಲಿ ನಡುವೆ ವ್ಯಾಪಾರ ಒಪ್ಪಂದ ನೆರವೇರಲಿದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯ ತಿಳಿಸಿದ್ದು, 'ಜಗತ್ತಿನಲ್ಲೇ ಭಾರತವು ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರ. ಈ ವ್ಯಾಪಾರ ಒಪ್ಪಂದಕ್ಕೆ ನಾನು ಅವಸರ ಮಾಡುವುದಿಲ್ಲ' ಎಂದಿದ್ದಾರೆ.
'ದಕ್ಷಿಣ ಕೊರಿಯಾ ವ್ಯಾಪಾರ ಒಪ್ಪಂದಕ್ಕೆ ಮುಂದಾಗಿದೆ. ಆದರೆ ನಾನು ಎಲ್ಲರೊಂದಿಗೂ ಒಪ್ಪಂದ ಮಾಡಿಕೊಳ್ಳುವುದಿಲ್ಲ. ನಮ್ಮ ಬಳಿ 150 ರಾಷ್ಟ್ರಗಳಿವೆ. ಎಲ್ಲರನ್ನೂ ಭೇಟಿಯಾಗಲು ಸಾಧ್ಯವಿಲ್ಲ. ಅದಕ್ಕೊಂದು ಮಿತಿ ಹೇರುತ್ತೇನೆ. ಕೆಲವು ಒಪ್ಪಂದ ಮಾಡಿಕೊಳ್ಳುತ್ತೇನೆ' ಎಂದು ಹೇಳಿದ್ದಾರೆ.
ಅಮೆರಿಕದ ವಸ್ತುಗಳಿಗೆ ಭಾರತವು ಸುಂಕ ಕಡಿತಕ್ಕೆ ಮುಂದಾಗಿದೆ ಎಂದು ಟ್ರಂಪ್ ಪದೇಪದೇ ಹೇಳುತ್ತಿರುವುದಕ್ಕೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್, 'ಯಾವುದೇ ವ್ಯಾಪಾರ ಒಪ್ಪಂದವು ಪರಸ್ಪರ ಲಾಭದಾಯಕವಾಗಿರಬೇಕು' ಎಂದಿದ್ದಾರೆ.
ವ್ಯಾಪಾರ ಒಪ್ಪಂದ ಪ್ರಸ್ತಾವ ಕುರಿತು ಮಾತುಕತೆಗೆ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಸದ್ಯ ವಾಷಿಂಗ್ಟನ್‌ನಲ್ಲಿದ್ದಾರೆ. ಅವರು ಅಲ್ಲಿನ ವಾಣಿಜ್ಯ ಕಾರ್ಯದರ್ಶಿ ಹಾವರ್ಡ್ ಲುಟ್‌ನಿಕ್ ಮತ್ತು ವ್ಯಾಪಾರ ಕ್ಷೇತ್ರದ ಪ್ರತಿನಿಧಿ ಜೇಮೀಸನ್ ಗ್ರೀರ್ ಅವರೊಂದಿಗೆ ಚರ್ಚಿಸುವ ಸಾಧ್ಯತೆಗಳಿವೆ.
ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದಲ್ಲಿ ಜವಳಿ, ಆಭರಣ, ಬೆಲೆಬಾಳುವ ರತ್ನಗಳು, ವಸ್ತ್ರ, ಪ್ಲಾಸ್ಟಿಕ್, ರಾಸಾಯನಿಕ, ಸೀಗಡಿ, ಎಣ್ಣೆ ಕಾಳುಗಳು, ದ್ರಾಕ್ಷಿ, ಬಾಳೆಹಣ್ಣು ಕ್ಷೇತ್ರಗಳಲ್ಲಿ ಒಪ್ಪಂದ ನಡೆಯುವ ಸಾಧ್ಯತೆ ಇದೆ.
ಮತ್ತೊಂದೆಡೆ ಕೈಗಾರಿಕಾ ಸಾಮಗ್ರಿಗಳು, ಇವಿ ವಾಹನಗಳನ್ನು ಒಳಗೊಂಡು ಆಟೊಮೊಬೈಲ್, ವೈನ್‌ಗಳು, ಪೆಟ್ರೊಕೆಮಿಕಲ್ ಉತ್ಪನ್ನ, ಹೈನು ಪದಾರ್ಥ, ಸೇಬು ಮತ್ತು ಒಣ ಹಣ್ಣುಗಳ ಸಹಿತ ಕೃಷಿ ಉತ್ಪನ್ನಗಳ ಮೇಲಿನ ಸುಂಕವನ್ನು ಕಡಿತಗೊಳಿಸಬೇಕು ಎಂದು ಅಮೆರಿಕ ಒತ್ತಡ ಹೇರಿದೆ.






