ನವದಹೆಲಿ: ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿದ ಬೆನ್ನಲ್ಲೇ, ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಿದ ಕೇಂದ್ರ ಸರ್ಕಾರವು ಸಿಂಧೂ ಜಲ ಒಪ್ಪಂದವನ್ನು ಅಮಾನತು ಮಾಡಿದೆ.
ಈ ಹಿನ್ನೆಲೆಯಲ್ಲಿ ಚಿನಾಬ್ ನದಿಯ ರಂಬಂನ್ ಮತ್ತು ಸಲಾಲ್ ಡ್ಯಾಂಗಳ ಎಲ್ಲಾ ಗೇಟ್‌ಗಳನ್ನು ಭಾರತ ಮುಚ್ಚಿದ್ದು ಪಾಕಿಸ್ತಾನದತ್ತ ನೀರು ಹರಿಯುತ್ತಿಲ್ಲ ಎಂದು ಇಲ್ಲಿನ ನೀರಾವರಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಆದಾಗ್ಯೂ ಸಲಾಲ್ ಡ್ಯಾಂ ಒಂದು ಗೇಟ್ ಅನ್ನು ತೆರೆಯಲಾಗಿದೆ. ತಾಂತ್ರಿಕ ಕಾರಣಕ್ಕೆ ಈ ಗೇಟ್ ಓಪನ್ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಮುಚ್ಚಲಾಗುವುದು ಎಂದು ಅವರು ಹೇಳಿದರು.
ಇಲ್ಲಿಂದ ಹರಿಯುವ ನೀರನ್ನು ಪಾಕಿಸ್ತಾನ ಕೃಷಿ ಹಾಗೂ ಜಲ ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡುತ್ತದೆ ಎಂದು ಅವರು ಮಾಹಿತಿ ನೀಡಿದರು.
ಜಲ ಒಪ್ಪಂದ...
ವಿಶ್ವ ಬ್ಯಾಂಕ್ ಮಧ್ಯಸ್ಥಿಕೆಯಲ್ಲಿ 1960ರಲ್ಲಿ ಏರ್ಪಟ್ಟ ಈ ಒಪ್ಪಂದದಡಿ, ಪೂರ್ವದ ಸಟ್ಲೇಜ್, ರಾವಿ, ಬ್ಯಾಸ್ ನದಿಗಳ ನೀರಿನ ಹಕ್ಕುಗಳು ಸಂಪೂರ್ಣ ಭಾರತಕ್ಕೆ ಸೇರಿದರೆ, ಪಶ್ಚಿಮದ ಸಿಂಧೂ, ಝೇಲಮ್ ಹಾಗೂ ಚಿನಾಬ್ ನದಿಗಳ ನೀರಿನ ಮೇಲಿನ ಹಕ್ಕು ಪಾಕಿಸ್ತಾನದ್ದು.
ಸಟ್ಲೇಜ್, ರಾವಿ, ಬ್ಯಾಸ್ ನದಿಗಳಲ್ಲಿ ವಾರ್ಷಿಕವಾಗಿ ಸರಾಸರಿ 3.3 ಕೋಟಿ ಎಕರೆ ಅಡಿಗಳಷ್ಟು ನೀರು ಹರಿಯುತ್ತದೆ. ಸಿಂಧೂ, ಝೇಲಮ್ ಹಾಗೂ ಚಿನಾಬ್‌ನಲ್ಲಿ ವಾರ್ಷಿಕವಾಗಿ ಸರಾಸರಿ 13.5 ಕೋಟಿ ಎಕರೆ ಅಡಿಗಳಷ್ಟು ನೀರು ಹರಿಯುತ್ತದೆ. ಈ ಲೆಕ್ಕದಲ್ಲಿ, ಪಾಕಿಸ್ತಾನಕ್ಕೆ ಹಂಚಿಕೆಯಾಗಿರುವ ನೀರಿನ ಪ್ರಮಾಣ ಅಧಿಕ.
ಈಗ ಜಲ ಒಪ್ಪಂದವನ್ನು ಅಮಾನತು ಮಾಡಿರುವುದರಿಂದ, ಸಿಂಧೂ, ಝೇಲಂ ಹಾಗೂ ಚಿನಾಬ್ ನದಿಗಳ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವ ಮಾರ್ಗೋಪಾಯಗಳ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.






