ಜಮ್ಮು: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಸತತ 10ನೇ ದಿನವೂ ಪಾಕಿಸ್ತಾನ ಕದನ ವಿರಾಮ ನಿಯಮ ಉಲ್ಲಂಘಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಶನಿವಾರ ಮತ್ತು ಭಾನುವಾರ ಎಂಟು ಜಿಲ್ಲೆಗಳಲ್ಲಿ ಹೊಂದಿಕೊಂಡಿರುವ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆಯಾಗಿದೆ.
ಪಹಲ್ಗಾಮ್ ದಾಳಿ ಬಳಿಕ ಸತತ 10ನೇ ದಿನ ಪಾಕ್ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಣ್ಣ ಶಸ್ತ್ರಾಸ್ತ್ರಗಳ ಮೂಲಕ ಪಾಕಿಸ್ತಾನ ದಾಳಿ ನಡೆಸಿದೆ. ಕುಪ್ವಾರಾ, ಬಾರಾಮುಲ್ಲಾ, ಪೂಂಚ್, ನೌಶೇರಾ, ರಾಜೌರಿ, ಅಖ್ನೂರ್ ಗಡಿ, ಮೆಂಧರ್, ಸುಂದರ್‌ಬನಿ ಜಿಲ್ಲೆಗಳಲ್ಲಿ ದಾಳಿ ನಡೆದಿದೆ.
2021ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಒಪ್ಪಂದವಾದ ಬಳಿಕ ಗಡಿ ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಇಲ್ಲವೇ ಇಲ್ಲ ಎನ್ನುವಂತಾಗಿತ್ತು. ಆದರೆ ಪಾಕಿಸ್ತಾನದೊಂದಿಗೆ ನಂಟು ಹೊಂದಿದ್ದರು ಎನ್ನಲಾದ ಉಗ್ರರು ಪಹಲ್ಗಾಮ್‌ನಲ್ಲಿ ಅಮಾಯಕರ ಮೇಲೆ ಗುಂಡಿನ ದಾಳಿ ನಡೆಸಿದ ಬಳಿಕ ಭಾರತ -ಪಾಕಿಸ್ತಾನ ಸಂಬಂಧ ಹದಗೆಟ್ಟಿದೆ.
ದಾಳಿಗೆ ಪ್ರತಿಯಾಗಿ ಭಾರತ, ಪಾಕಿಸ್ತಾನಕ್ಕೆ ಸಿಂಧೂ ನದಿಯ ನೀರನ್ನು ಬಂದ್ ಮಾಡುವುದು, ಪಾಕ್ ಪ್ರಜೆಗಳ ವೀಸಾ ರದ್ದು, ಪಾಕ್‌ನಿಂದ ಬರುವ ಸರಕುಗಳಿಗೆ ನಿರ್ಬಂಧ ಹೇರುವುದು ಸೇರಿದಂತೆ ಹಲವು ಬಿಗಿ ಕ್ರಮಗಳನ್ನು ಕೈಗೊಂಡಿದೆ.




