"ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯಲ್ಲಿ ಭಾರತದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ.ಕೃಷ್ಣಮೂರ್ತಿ ಸುಬ್ರಮಣಿಯನ್ ಅವರ ಸೇವೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸುವ ಪ್ರಸ್ತಾವವನ್ನು ನೇಮಕಾತಿ ಕುರಿತ ಸಂಪುಟ ಸಮಿತಿ ಅನುಮೋದಿಸಿದೆ" ಎಂದು ಏಪ್ರಿಲ್ 30ರ ದಿನಾಂಕದ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಭಾರತದ ಮುಖ್ಯ ಆರ್ಥಿಕ ಸಲಹೆಗಾರರಾಗಿ 2018 ರಿಂದ 2021ರವರೆಗೂ ಕಾರ್ಯ ನಿರ್ವಹಿಸಿದ್ದ ಸುಬ್ರಮಣಿಯನ್, ತಮ್ಮ ಮೂರು ವರ್ಷಗಳ ಸೇವಾವಧಿ ಮುಕ್ತಾಯವಾಗುವುದಕ್ಕಿಂತ ಆರು ತಿಂಗಳು ಮೊದಲೇ ಪದತ್ಯಾಗ ಮಾಡಿದದರು. 2022ರ ಆಗಸ್ಟ್ ನಲ್ಲಿ ಸರ್ಕಾರ ಅವರನ್ನು ಐಎಂಎಫ್ಗೆ ನೇಮಕ ಮಾಡಿದ್ದು, 2022ರ ನವೆಂಬರ್ 1ರಂದು ಅಧಿಕಾರ ವಹಿಸಿಕೊಂಡಿದ್ದರು.
ಐಎಂಎಫ್ ವೆಬ್ ಸೈಟ್ ಪ್ರಕಾರ, ಕೃಷ್ಣಮೂರ್ತಿ ಸುಬ್ರಮಣಿಯನ್ ಮೇ 2ರ ವರೆಗೆ ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಯಲ್ಲಿದ್ದರು. ಭಾರತ, ಬಾಂಗ್ಲಾದೆಶ, ಭೂತಾನ್ ಮತ್ತು ಶ್ರೀಲಂಕಾವನ್ನು ಪ್ರತಿನಿಧಿಸುವ ಕ್ಷೇತ್ರವನ್ನು ಮೇ 3ರಿಂದ ಖಾಲಿ ಹುದ್ದೆ ಎಂದು ಗುರುತಿಸಲಾಗಿದೆ.
ಪಾಕಿಸ್ತಾನಕ್ಕೆ ನೆರವು ನೀಡುವ ವ್ಯವಸ್ಥೆಯ ಪರಾಮರ್ಶೆಗಾಗಿ ಮೇ 9ರಂದು ಐಎಂಎಫ್ ಆಡಳಿತ ಮಂಡಳಿಯ ಸಭೆ ನಡೆಯಲಿದ್ದು, ಇದಕ್ಕೆ ಮುನ್ನವೇ ಸುಬ್ರಮಣಿಯನ್ ಅವರ ನಿರ್ಗಮನ ಕುತೂಹಲಕ್ಕೆ ಕಾರಣವಾಗಿದೆ. ಭಯೋತ್ಪಾದನೆಗೆ ನೆರವು ನೀಡುತ್ತಿದೆ ಎಂದು ಆಪಾದಿಸಿ ಪಾಕಿಸ್ತಾನಕ್ಕೆ ಹೆಚ್ಚುವರಿ ಹಣಕಾಸು ನೆರವು ನೀಡುವುದನ್ನು ಭಾರತ ವಿರೋಧಿಸುವ ನಿರೀಕ್ಷೆ ಇದೆ. ಇದಕ್ಕೂ ಮುನ್ನ ಅರ್ಥಶಾಸ್ತ್ರಜ್ಞ ಸುರ್ಜೀತ್ ಬಲ್ಲಾ ಅವರು 2019ರ ನವೆಂಬರ್ನ ನಿಂದ ಈ ಹುದ್ದೆಯಲ್ಲಿದ್ದರು. ಬಳಿಕ 2020ರಲ್ಲಿ ಮತ್ತೆರಡು ವರ್ಷದ ಅವಧಿಗೆ ಮರು ಆಯ್ಕೆಗೊಂಡಿದ್ದರು.




