ಮುಳ್ಳೇರಿಯ: ನೆಕ್ರಾಜೆ ಸಂತಾನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಮೇ12 ರಂದು ಧನ್ವಂತರಿ ಪುತ್ರ ಕಾಮೇಷ್ಠಿ ನಡೆಯಲಿದ್ದು ಈ ಬಗ್ಗೆ ಕಾರ್ಯಕಾರಿ ಸಮಿತಿ ಅಂತಿಮ ಸಿದ್ದತಾ ಸಭೆ ಶ್ರೀ ಕ್ಷೇತ್ರದಲ್ಲಿ ಜರಗಿತು. ವೈದಿಕ ವಿಭಾಗ, ಕಚೇರಿ ನಿರ್ವಹಣೆ, ಸಭಾ ಕಾರ್ಯಕ್ರಮ, ಭೋಜನ ವ್ಯವಸ್ಥೆ ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಮೇ 10 ಮತ್ತು 11ರಂದು ಸಮಿತಿಯ ಎಲ್ಲಾ ಪದಾಧಿಕಾರಿಗಳು ಸದಸ್ಯರು ದೇವಸ್ಥಾನದಲ್ಲಿದ್ದು ಸಿದ್ಧತೆಗಳನ್ನು ಪೂರ್ಣಗೊಳಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಪುಂಡರೀಕಾಕ್ಷ ಬೆಳ್ಳೂರು, ಗಣೇಶ ವತ್ಸ, ಸೀತಾರಾಮ ಭಟ್ ಮುಂಗಿಲ, ಗಂಗಾಧರ ರೈ ಮಾಸ್ಟರ್ ಮವ್ವಾರು, ಮಂಜುನಾಥ ಮಾನ್ಯ, ಲೋಕೇಶ್ ಎಂ.ಬಿ ಆಚಾರ್ ಕಂಬಾರು ಮೊದಲಾದವರು ಉಪಸ್ಥಿತರಿದ್ದರು.
ಮೇ 12ರಂದು ಬೆಳಗ್ಗೆ 5.30ಕ್ಕೆ ಡಾ. ವೇಣುಗೋಪಾಲ ಕಳೆಯತ್ತೋಡಿ ಅವರು ದೀಪ ಪ್ರಜ್ವಲನಗೊಳಿಸುವರು. ನಂತರ ವಿವಿಧ ಸಂಘಗಳಿಂದ ಭಜನಾ ಕಾರ್ಯಕ್ರಮ, ಗಣಪತಿ ಹೋಮ,ಯಾಗ ಸಂಕಲ್ಪ ಧನ್ವಂತರಿ ನಾಮಜಪ ಯಜ್ಞ, ಧನ್ವಂತರೀಯಾಗ, ಪುತ್ರ ಕಾಮೆಷ್ಠಿ ಯಾಗ ನಡೆಯಲಿದ್ದು ಲೋಕಕಲ್ಯಾಣಕ್ಕಾಗಿ ಮಹಾಪ್ರಾರ್ಥನೆ ನಡೆಯಲಿದೆ.
ಸಂಜೆ 3ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಮದ್‍ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನದ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿ ಆಶೀರ್ವಚನ ನೀಡುವರು. ಡಾ ಶ್ರೀ ಕಿಶೋರ್ ಕುಮಾರ್ ಕುಣಿಕುಳ್ಳಾಯ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ಎನ್.ಆರ್ ದಾಮೋದರ ಶರ್ಮ ಧಾರ್ಮಿಕ ಉಪನ್ಯಾಸ ನೀಡುವರು.




