ಕಾಸರಗೋಡು: ರಾಜ್ಯದ ಇತಿಹಾಸದಲ್ಲಿ ಅತ್ಯಂತ ಭ್ರಷ್ಟ ಸರ್ಕಾರವನ್ನು ರಾಜ್ಯದ ಜನತೆಗೆ ನೀಡಿದ ಕುಖ್ಯಾತಿ ಪಿಣರಾಯಿ ವಿಜಯನ್ ಅವರಿಗೆ ಸಲ್ಲುವುದಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ವಕೀಲ ಸೋನಿ ಸೆಬಾಸ್ಟಿಯನ್ ತಿಳಿಸಿದ್ದಾರೆ.
ಅವರು ಭ್ರಷ್ಟಾಚಾರಕ್ಕೆ ನೇತೃತ್ವ ನೀಡುತ್ತಿರುವ ಪಿಣರಾಯಿ ವಿಜಯನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಆಯೋಜಿಸಲಾಗಿದ್ದ ಧರಣಿ ಉದ್ಘಾಟಿಸಿ ಮಾತನಾಡಿದರು. ಕಳೆದ ಒಂಬತ್ತು ವರ್ಷಗಳ ಎಡರಂಗ ಆಡಳಿತ, ಭ್ರಷ್ಟಾಚಾರಕ್ಕೆ ಅನ್ವರ್ಥವಾಗಿ ಮುಂದುವರಿಯುತ್ತಿದೆ. ರಾಜ್ಯದ ಅಭಿವೃದ್ಧಿ ಕುಂಠೀತಗೊಂಡಿದ್ದು, ಎಲ್ಲ ವಲಯವನ್ನು ಬಾಧಿಸಿದೆ. ರಾಜ್ಯ ಮದ್ಯ ಮತ್ತು ಮಾದಕ ದ್ರವ್ಯ ಮಾಫಿಯಾಗಳ ಹಿಡಿತದಲ್ಲಿ ನಲುಗುವಂತಾಗಿದೆ ಎಂದು ದೂರಿದರು.
ಡಿಸಿಸಿ ಅಧ್ಯಕ್ಷ ಪಿ.ಕೆ ಫೈಸಲ್ ಅದ್ಯಕ್ಷತೆ ವಹಿಸಿದ್ದರು. ಹಾಕಿಂ ಕುನ್ನಿಲ್, ಗೋವಿಂದನ್ ನಾಯರ್, ಎಂ. ಹಸೈನಾರ್‍ಕೆ. ನೀಲಕಂಠನ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಮೊದಲು ವಿದ್ಯಾನಗರದ ಮಧೂರು ರಸ್ತೆಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು.





