ಚಂಡೀಗಢ/ಲಖನೌ : 'ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳಿಗೆ ಭಾರತದ ಸೇನಾ ಚಟುವಟಿಕೆಗಳ ಕುರಿತು, ಇಲ್ಲಿನ ಸೇನಾ ನೆಲೆಗಳ ಬಗ್ಗೆ ಮಾಹಿತಿ ಹಂಚಿಕೊಂಡ ಆರೋಪದಲ್ಲಿ ಹರಿಯಾಣದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರನ್ನೂ ಸೇರಿ ಇಲ್ಲಿಯವರೆಗೆ ಒಟ್ಟು 12 ಜನರನ್ನು ಬಂಧಿಸಲಾಗಿದೆ' ಎಂದು ಪೊಲೀಸರು ತಿಳಿಸಿದರು.
'ಕಳೆದ ಎರಡು ವಾರಗಳಲ್ಲಿ ಆರು ಮಂದಿ ಪಂಜಾಬ್, ನಾಲ್ವರನ್ನು ಹರಿಯಾಣದಿಂದ ಬಂಧಿಸಲಾಗಿದೆ. ಉತ್ತರ ಪ್ರದೇಶದಲ್ಲಿಯೂ ಬಂಧನಗಳಾಗಿವೆ. ಈ ಎಲ್ಲರೂ ಉತ್ತರ ಭಾರತದಲ್ಲಿ ಹರಡಿಕೊಂಡಿರುವ ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುವ ದೊಡ್ಡ ಜಾಲದ ಭಾಗವಾಗಿದ್ದಾರೆ' ಎಂದರು.
'ಬಂಧಿತರಲ್ಲಿ ಇಬ್ಬರು ಮಹಿಳೆಯರಿದ್ದಾರೆ. ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಕಚೇರಿ ಅಧಿಕಾರಿ ಎಹ್ಸಾನ್ ಉರ್ ರಹೀಮ್ ಅಲಿಯಾಸ್ ಡ್ಯಾನಿಷ್ ಅವರೊಂದಿಗೆ ಈ ಇಬ್ಬರು ಮಹಿಳೆಯರೂ ಸಂಪರ್ಕ ಹೊಂದಿದ್ದರು. ಬೇಹುಗಾರಿಕೆ ನಡೆಸುತ್ತಿದ್ದಾರೆ ಎನ್ನುವ ಆರೋಪದಲ್ಲಿ ಡ್ಯಾನಿಷ್ ಅವರನ್ನು ಮೇ 13ರಂದು ಭಾರತವು ಗಡೀಪಾರು ಮಾಡಿತ್ತು' ಎಂದು ವಿವರಿಸಿದರು.
'ಬಂಧಿತರ ಹಣಕಾಸಿನ ವ್ಯವಹಾರ ಮತ್ತು ಅವರಿಂದ ಪಡೆದುಕೊಂಡ ಅವರ ಮೊಬೈಲ್‌ಗಳನ್ನು ಪರಿಶೀಲಿಸಲಾಗುತ್ತಿದೆ. ಇದಕ್ಕಾಗಿ ವಿಧಿವಿಜ್ಞಾನ ಸಂಸ್ಥೆಗೆ ಕಳುಹಿಸಲಾಗಿದೆ. ಉತ್ತರ ಪ್ರದೇಶದ ರಾಮ್‌ಪುರದಲ್ಲಿ ಭಾನುವಾರ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ. ಇವರು ಪಾಕಿಸ್ತಾನ ಗುಪ್ತಚರ ಸಂಸ್ಥೆಯ ಇಂಟರ್ ಸರ್ವೀಸಸ್ ಇಂಟೆಲಿಜನ್ಸ್‌ನ (ಐಎಸ್‌ಐ) ಏಜೆಂಟ್ ಆಗಿದ್ದಾರೆ' ಎಂದರು.




