ಮಾಸ್ಕೊ/ಕೀವ್: ಇಸ್ತಾನ್‌ಬುಲ್‌ನಲ್ಲಿ ಮೇ 15ರಂದು ಉಕ್ರೇನ್ ಜೊತೆ ಪೂರ್ವಷರತ್ತು ರಹಿತ ನೇರ ಶಾಂತಿ ಮಾತುಕತೆ ನಡೆಸುವ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾನುವಾರ ಪ್ರಸ್ತಾವ ಮಾಡಿದ್ದಾರೆ. ಇದನ್ನು ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್‌ಸ್ಕಿ ಸ್ವಾಗತಿಸಿದ್ದಾರೆ.
ಆದರೆ ಮಾತುಕತೆಗೆ ಮೊದಲು ಪೂರ್ಣ, ತಾತ್ಕಾಲಿಕ ಕದನವಿರಾಮವಿರಬೇಕು ಎಂದು ಝೆಲೆನ್‌ಸ್ಕಿ ಒತ್ತಾಯಿಸಿದ್ದಾರೆ.
30 ದಿನಗಳ ಷರತ್ತುರಹಿತ ಕದನವಿರಾಮಕ್ಕೆ ಒಪ್ಪದಿದ್ದರೆ ಒತ್ತಡ ಹೇರುವುದಾಗಿ ಯೂರೋಪ್‌ನ ನಾಲ್ಕು ಪ್ರಮುಖ ರಾಷ್ಟ್ರಗಳ ನಾಯಕರು ಎಚ್ಚರಿಕೆ ನೀಡಿದ ಬೆನ್ನಲ್ಲೇ ಪುಟಿನ್ ಮಾತುಕತೆಯ ಪ್ರಸ್ತಾವ ಮಾಡಿದ್ದಾರೆ.
'ಕದನವಿರಾಮದ ಹೊರತಾಗಿ ಮಾತುಕತೆ ನಡೆಸಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಮುಂದಾಗಿರುವುದು ಸಕಾರಾತ್ಮಕ ಬೆಳವಣಿಗೆ. ಸಂಪೂರ್ಣ ಜಗತ್ತು ಬಹುಸಮಯದಿಂದ ಇದಕ್ಕಾಗಿ ಕಾಯುತ್ತಿದೆ. ಯಾವುದೇ ಯುದ್ಧವನ್ನು ಕೊನೆಗೊಳಿಸುವ ಪ್ರಕ್ರಿಯೆಯ ಮೊದಲ ಹೆಜ್ಜೆ ಕದನವಿರಾಮ' ಎಂದು ಝೆಲೆನ್‌ಸ್ಕಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
30 ದಿನಗಳ ಕದನವಿರಾಮ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಝೆಲೆನ್‌ಸ್ಕಿ ಸೋಮವಾರ ಪ್ರಸ್ತಾವ ಮಾಡಿದ್ದರು. 'ಪ್ರತಿದಿನವೂ ಹತ್ಯೆಯನ್ನು ನಡೆಸುವುದರಲ್ಲಿ ಅರ್ಥವಿಲ್ಲ. ನಾಳೆಯಿಂದ (ಮೇ 12) ಪೂರ್ಣ, ಶಾಶ್ವತ ಮತ್ತು ವಿಶ್ವಾಸಾರ್ಹ ಕದನವಿರಾಮಕ್ಕೆ ರಷ್ಯಾ ಒಪ್ಪಿಗೆ ನೀಡುತ್ತದೆ ಎಂಬ ಭರವಸೆ ಇದೆ. ಮಾತುಕತೆಗೆ ಉಕ್ರೇನ್ ಸಿದ್ಧವಿದೆ' ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ.
30 ದಿನಗಳ ಕದನವಿರಾಮ ಒಪ್ಪಂದವನ್ನು ತಕ್ಷಣ ಜಾರಿಗೊಳಿಸುವ ಪ್ರಸ್ತಾವವನ್ನು ಪುಟಿನ್ ತಿರಸ್ಕರಿಸಿದರು.
ರಷ್ಯಾ ದಾಳಿ: ರಷ್ಯಾ ಘೋಷಿಸಿದ್ದ ಮೂರು ದಿನಗಳ ವಿರಾಮ ಮುಗಿದ ಬೆನ್ನಲ್ಲೇ ಉಕ್ರೇನ್ ಮೇಲೆ ಭಾನುವಾರ ನೂರಾರು ಡ್ರೋನ್‌ಗಳು ದಾಳಿ ನಡೆಸಿವೆ.
'6 ಬೇರೆ ಬೇರೆ ಸ್ಥಳಗಳಿಂದ ರಷ್ಯಾದ 108 ಡ್ರೋನ್‌ಗಳು ದಾಳಿ ನಡೆಸಿವೆ. ಅವುಗಳಲ್ಲಿ 60 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದ್ದು, ಉಕ್ರೇನ್‌ನ ಪ್ರತಿಕ್ರಮದಿಂದಾಗಿ 41 ಸಿಮ್ಯುಲೇಟರ್ ಡ್ರೋನ್‌ಗಳು ಗುರಿಯನ್ನು ತಲುಪಿಲ್ಲ' ಎಂದು ಉಕ್ರೇನ್ ವಾಯುಪಡೆ ಹೇಳಿದೆ.
ವ್ಲಾದಿಮಿರ್ ಪುಟಿನ್




