ಇಸ್ಲಾಮಾಬಾದ್: ಜಲ ಸಂಪನ್ಮೂಲ ಹಂಚಿಕೆ ಮತ್ತು ಕಾಶ್ಮೀರ ಸಮಸ್ಯೆ ಸೇರಿದಂತೆ ಉಭಯ ದೇಶಗಳ ನಡುವಿನ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಶಾಂತಿಯುತ ಮಾತುಕತೆಯ ಮಾರ್ಗವನ್ನು ಅಳವಡಿಸಿಕೊಳ್ಳಬೇಕು ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಪ್ರತಿಪಾದಿಸಿದ್ದಾರೆ.
ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಶನಿವಾರ ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಾದೇಶಿಕ ಶಾಂತಿಯ ಹಿತದೃಷ್ಟಿಯಿಂದ ಭಾರತದೊಂದಿಗಿನ ಒಪ್ಪಂದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾಗಿ ಹೇಳಿದರು.
ಅಣ್ವಸ್ತ್ರಗಳನ್ನು ಹೊಂದಿರುವ ಎರಡು ದೇಶಗಳ ನಡುವಿನ ಉದ್ವಿಗ್ನತೆ ಶಮನಗೊಳಿಸಲು ಅಮೆರಿಕ, ಬ್ರಿಟನ್, ಟರ್ಕಿಯೆ, ಸೌದಿ ಅರೇಬಿಯಾ, ಕತಾರ್, ಯುಎಇ ನಾಯಕರು ಮತ್ತು ವಿಶ್ವಸಂಸ್ಥೆಯ ಮುಖ್ಯಸ್ಥರು ರಾಜತಾಂತ್ರಿಕ ಪ್ರಯತ್ನಗಳನ್ನು ಸಕಾರಾತ್ಮಕವಾಗಿ ನಡೆಸಿದ್ದಾರೆ. ಇದಕ್ಕಾಗಿ ಅವರೆಲ್ಲರಿಗೂ ಕೃತಜ್ಞತೆ ಅರ್ಪಿಸುವುದಾಗಿ ಪ್ರಧಾನಿ ಹೇಳಿದರು.
ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ತನ್ನ ಮಿತ್ರರಾಷ್ಟ್ರವಾದ ಚೀನಾ ಅಗತ್ಯ ಬೆಂಬಲ ಮತ್ತು ಸಹಕಾರ ನೀಡಿದೆ ಎಂದು ಅವರು ವಿವರಿಸಿದರು.
ಪಾಕಿಸ್ತಾನ ಸೇನೆ ಕೈಗೊಂಡಿದ್ದ ಆಪರೇಷನ್ 'ಬುನ್ಯಾನ್-ಉನ್- ಮರ್ಸೂಸ್' ಯಶಸ್ವಿಯಾಗಿದೆ ಎಂದು ಪ್ರಧಾನಿ ಷರೀಫ್ ನೀಡಿರುವ ಹೇಳಿಕೆಯನ್ನು 'ರೇಡಿಯೊ ಪಾಕಿಸ್ತಾನ' ಪ್ರಸಾರ ಮಾಡಿದೆ.




