ನವದೆಹಲಿ: ಭಯೋತ್ಪಾದನೆ ವಿರುದ್ಧ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಲು ಬದ್ಧವಾಗಿರುವುದಾಗಿ ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಮಧ್ಯ ಆಫ್ರಿಕಾದ ರಾಷ್ಟ್ರ ಅಂಗೋಲಾಕ್ಕೆ 200 ಮಿಲಿಯನ್ ಡಾಲರ್ (ಅಂದಾಜು ₹ 1,691 ಕೋಟಿ) ರಕ್ಷಣಾ ಸಾಲ ನೀಡುವುದಾಗಿ ಶನಿವಾರ ಘೋಷಿಸಿದ್ದಾರೆ.
ಅಂಗೋಲಾ ಅಧ್ಯಕ್ಷ ಜಾವೊ ಲಾರೆನ್ಸೊ ಅವರು ನಾಲ್ಕು ದಿನಗಳ ಭೇಟಿ ಸಲುವಾಗಿ ಗುರುವಾರ ಭಾರತಕ್ಕೆ ಬಂದಿದ್ದಾರೆ. ಅವರೊಂದಿಗೆ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಸೇರಿದಂತೆ ದ್ವಿಪಕ್ಷೀಯ ಸಂಬಂಧ ಕುರಿತು ಸುದೀರ್ಘ ಮಾತುಕತೆ ನಡೆಸಿದ ಬಳಿಕ ಈ ಘೋಷಣೆ ಮಾಡಿದ್ದಾರೆ.
ಲೌರೆನ್ಸೊ ಅವರ ಭಾರತ ಭೇಟಿಯು ದ್ವಿಪಕ್ಷೀಯ ಸಂಬಂಧಕ್ಕೆ ಹೊಸ ದಿಕ್ಕು ನೀಡಿರುವುದಷ್ಟೇ ಅಲ್ಲದೆ, ಭಾರತ-ಆಫ್ರಿಕಾ ಪಾಲುದಾರಿಕೆಯನ್ನೂ ಬಲಪಡಿಸಿದೆ ಎಂದು ಪ್ರಕಟಣೆಯಲ್ಲಿ ಮೋದಿ ತಿಳಿಸಿದ್ದಾರೆ.
'ಅಂಗೋಲಾ ಸೇನಾ ಪಡೆಗಳ ಆಧುನೀಕರಣವನ್ನು ಬೆಂಬಲಿಸುವ ನಿಟ್ಟಿನಲ್ಲಿ ಭಾರತದಿಂದ 200 ಮಿಲಿಯನ್ ಡಾಲರ್ ರಕ್ಷಣಾ ಸಾಲ ಘೋಷಿಸುವುದಕ್ಕೆ ಹರ್ಷವೆನಿಸುತ್ತಿದೆ. ನಾವು ಭಯೋತ್ಪಾದಕರು ಮತ್ತು ಅವರಿಗೆ ಬೆಂಬಲ ನೀಡುತ್ತಿರುವವರ ವಿರುದ್ಧ ದೃಢ ಹಾಗೂ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಲು ಬದ್ಧರಾಗಿದ್ದೇವೆ' ಎಂದು ಹೇಳಿದ್ದಾರೆ.
ರಕ್ಷಣಾ ವೇದಿಕೆಗಳ ದುರಸ್ತಿ, ಕೂಲಂಕಷ ಪರೀಕ್ಷೆ ಮತ್ತು ಪೂರೈಕೆ ಕುರಿತಾಗಿಯೂ ಲೌರೆನ್ಸೊ ಜೊತೆ ಚರ್ಚಿಸಲಾಗಿದೆ ಎಂದಿರುವ ಪ್ರಧಾನಿ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಸಾಮರ್ಥ್ಯ ನಿರ್ಮಾಣ ಕ್ಷೇತ್ರಗಳಲ್ಲಿಯೂ ಭಾರತ ತನ್ನ ಸಾಮರ್ಥ್ಯಗಳನ್ನು ಅಂಗೋಲಾ ಜೊತೆ ಹಂಚಿಕೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಸಮೀಪದಲ್ಲಿರುವ ಪ್ರವಾಸಿ ಸ್ಥಳದಲ್ಲಿ ಏಪ್ರಿಲ್ 22ರಂದು ಗುಂಡಿನ ದಾಳಿ ನಡೆಸಿದ್ದ ಉಗ್ರರು, 26 ಜನರನ್ನು ಹತ್ಯೆ ಮಾಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಮೋದಿ ಅವರು ಭಯೋತ್ಪಾದನೆ ವಿರುದ್ಧ ಮಹತ್ವದ ಘೋಷಣೆ ಮಾಡಿದ್ದಾರೆ.




