HEALTH TIPS

NIA ತನಿಖೆ ಚುರುಕು: ರಜೌರಿ ದಾಳಿಯಲ್ಲಿ ಭಾಗಿಯಾಗಿದ್ದವರ ವಿಚಾರಣೆ

ಶ್ರೀನಗರ: ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ತನಿಖೆಯನ್ನು ಚುರುಕುಗೊಳಿಸಿದೆ. 

2023ರ ಕಾಶ್ಮೀರದ ರಜೌರಿ ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ಭಯೋತ್ಪಾದಕರೊಂದಿಗೆ ಪಹಲ್ಗಾಮ್‌ ದಾಳಿಯ ಶಂಕಿತ ಉಗ್ರರು ಸಂಪರ್ಕ ಹೊಂದಿರುವ ಶಂಕೆಯನ್ನು ಎನ್‌ಐಎ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

2023ರ ಏಪ್ರಿಲ್‌ನಿಂದ ಜಮ್ಮುವಿನ ಜೈಲಿನಲ್ಲಿರುವ ಮುಷ್ತಾಕ್ ಮತ್ತು ನಿಸಾರ್‌ನನ್ನು ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಇವರಿಬ್ಬರು 2023ರ ಜ.1ರಂದು ರಜೌರಿ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ದಾಳಿಯ ರೂವಾರಿಗಳಾಗಿದ್ದಾರೆ. ಅಂದಿನ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಏಳು ನಾಗರಿಕರು ಮೃತಪಟ್ಟಿದ್ದರು.

ಪಹಲ್ಗಾಮ್‌ ದಾಳಿಯ ಬಗ್ಗೆ ಮುಷ್ತಾಕ್ ಮತ್ತು ನಿಸಾರ್‌ಗೆ ಮೊದಲೇ ತಿಳಿದಿರಬಹುದು ಅಥವಾ ಸಹಾಯ ಮಾಡಿರಬಹುದು ಎಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಭಯೋತ್ಪಾದಕ ಜಾಲವನ್ನು ಭೇದಿಸುವ ಸಲುವಾಗಿ ಮುಷ್ತಾಕ್ ಮತ್ತು ನಿಸಾರ್‌ನನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಏಪ್ರಿಲ್ 27ರಂದು ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಆದೇಶದ ನಂತರ ಎನ್‌ಐಎ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ತನಿಖೆಯನ್ನು ಔಪಚಾರಿಕವಾಗಿ ಆರಂಭಿಸಿತ್ತು. ಜತೆಗೆ, ಮಹಾರಾಷ್ಟ್ರ, ಒಡಿಶಾ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಿಗೆ ಭೇಟಿ ನೀಡಿ ಮೃತರ ಕುಟುಂಬಸ್ಥರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.

ವಿಸ್ತೃತ ತನಿಖೆಯ ಭಾಗವಾಗಿ ಎನ್‌ಐಎ ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರದ ಹಲವಾರು ಸೂಕ್ಷ್ಮ ಗಡಿ ಪ್ರದೇಶಗಳ ಮೇಲೆ ಕಣ್ಣಿಟ್ಟಿದ್ದು, ಗಡಿಯಾಚೆಗಿನ ಒಳನುಸುಳುವಿಕೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಇದೇ ವೇಳೆ ಪಹಲ್ಗಾಮ್‌ ದಾಳಿಕೋರರಿಗೆ ಲಾಜಿಸ್ಟಿಕಲ್ ಬೆಂಬಲ ನೀಡಿದ್ದಾರೆ ಎಂದು ಶಂಕಿಸಲಾದ 20 ಕಾರ್ಮಿಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಜತೆಗೆ, ಇತ್ತೀಚಿನ ದಿನಗಳಲ್ಲಿ 100ಕ್ಕೂ ಹೆಚ್ಚು ಶಂಕಿತ ಭೂಗತ ಕಾರ್ಮಿಕರನ್ನು ಸಾರ್ವಜನಿಕ ಭದ್ರತಾ ಕಾಯ್ದೆ (ಪಿಎಸ್‌ಎ) ಅಡಿಯಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪಿಎಸ್‌ಎ ಕಾಯ್ದೆಯಡಿ ಅಧಿಕಾರಿಗಳು ಯಾವುದೇ ವ್ಯಕ್ತಿಯನ್ನು ವಿಚಾರಣೆಯಿಲ್ಲದೆ ಎರಡು ವರ್ಷಗಳವರೆಗೆ ಬಂಧಿಸಬಹುದಾಗಿದೆ. 2019ರ ಆಗಸ್ಟ್‌ನಲ್ಲಿ 370ನೇ ವಿಧಿ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ಪಿಎಸ್‌ಎ ಕಾಯ್ದೆಯಡಿ ಬಂಧನಕ್ಕೊಳಪಡಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.

ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಕ್‌ ಮೇಲೆ ಭಾರತ ಹಲವು ನಿರ್ಬಂಧಗಳನ್ನು ವಿಧಿಸಿದೆ.

ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ (ಎಲ್‌ಒಸಿ) ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ, ಜಮ್ಮು ಮತ್ತು ಕಾಶ್ಮೀರದಾದ್ಯಂತ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ. ಜತೆಗೆ, ಗುಪ್ತಚರ ಸಂಸ್ಥೆಗಳು ಕಣ್ಗಾವಲು ಮತ್ತು ಒಳನುಸುಳುವಿಕೆ ನಿಗ್ರಹ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries