HEALTH TIPS

ಭಾರತ-ಪಾಕಿಸ್ತಾನ ಬಿಕ್ಕಟ್ಟು: 1947ರ ನಂತರ ನಡೆದ ಸಂಘರ್ಷಗಳ ವಿವರ ಇಲ್ಲಿದೆ...

ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏ.22ರಂದು ಉಗ್ರರು ಪ್ರವಾಸಿಗರ ಮೇಲೆ ನಡೆಸಿದ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ತಣ್ಣಗಿನ ಪ್ರೇಮ ಕಾಶ್ಮೀರದಲ್ಲಿ ಸಂತಸದಲ್ಲಿದ್ದ 26 ಕುಟುಂಬಗಳು ಸೂತಕದ ಛಾಯೆಯಲ್ಲಿ ಮುಳುಗಿದ್ದರು. ಇದರ ವಿರುದ್ಧ ಶತ್ರು ದೇಶದ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಭಾರತ ಮೇ.7 ರಂದು ಆಪರೇಷನ್‌ ಸಿಂಧೂರ ಎನ್ನುವ ಕಾರ್ಯಾಚರಣೆ ನಡೆಸಿ ಪಾಕ್‌ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದಲ್ಲಿನ 9 ಉಗ್ರರ ನೆಲೆಗಳನ್ನು ಸಂಪೂರ್ಣ ನಾಶಗೊಳಿಸಿದೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ವಿಷಮ ಸ್ಥಿತಿ ಇಂದು ನಿನ್ನೆಯದ್ದಲ್ಲ. ಎರಡೂ ದೇಶಗಳ ನಡುವೆ 1947ರಿಂದ ನಡೆದ ಸಂಘರ್ಷಗಳ ಪ್ರಮುಖ ಘಟನಾವಳಿಗಳು ಇಲ್ಲಿವೆ...

1947 (ಮೊದಲ ಇಂಡೋ-ಪಾಕ್‌ ಯುದ್ಧ): ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಭಾರತ ಪಾಕಿಸ್ತಾನದೊಂದಿಗೆ ಯುದ್ಧ ನಡೆಸಿತ್ತು. ಇದನ್ನು 'ಮೊದಲ ಕಾಶ್ಮೀರ ಯುದ್ಧ' ಎಂತಲೂ ಕರೆಯುತ್ತಾರೆ. ಅಕ್ಟೋಬರ್ 1947 ರಲ್ಲಿ ಪಾಕಿಸ್ತಾನ ಬೆಂಬಲಿತ ಬುಡಕಟ್ಟು ಸೇನಾಪಡೆಗಳು ಜಮ್ಮು ಮತ್ತು ಕಾಶ್ಮೀರದ ಮೇಲೆ ಆಕ್ರಮಣ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಮಹಾರಾಜ ಹರಿ ಸಿಂಗ್ ಜಮ್ಮು ಮತ್ತು ಕಾಶ್ಮೀರವನ್ನು ಭಾರತೀಯ ಒಕ್ಕೂಟಕ್ಕೆ ಸೇರಿಸಿದ್ದರು. ಭಾರತವು ಆ ಪ್ರದೇಶವನ್ನು ರಕ್ಷಿಸಲು ತನ್ನ ಸೈನ್ಯವನ್ನು ಕಳುಹಿಸಿತು, ಇದು ಎರಡು ರಾಷ್ಟ್ರಗಳ ನಡುವೆ ಪೂರ್ಣ ಪ್ರಮಾಣದ ಸಂಘರ್ಷಕ್ಕೆ ಕಾರಣವಾಯಿತು.

1949ರವರೆಗೂ ಇದು ಮುಂದುವರಿದಿತ್ತು. ಬಳಿಕ ವಿಶ್ವಸಂಸ್ಥೆ ಯುದ್ಧವಿರಾಮ ಘೋಷಿಸಿತು. ಇದರ ಪರಿಣಾಮ ನಿಯಂತ್ರಣ ರೇಖೆಯ ಉದ್ದಕ್ಕೂ (ಎಲ್‌ಒಸಿ) ಭಾರತ ಮತ್ತು ಪಾಕಿಸ್ತಾನದ ನಡುವೆ ಕಾಶ್ಮೀರ ವಿಭಜನೆಯಾಯಿತು.

1965 (ಎರಡನೇ ಇಂಡೋ-ಪಾಕ್‌ ಯುದ್ಧ): 1695ರ ಆ.5 ರಂದು ಕಾಶ್ಮೀರದಲ್ಲಿ ಸಶಸ್ತ್ರ ಪಡೆಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು. ಸಾವಿರಾರು ಪಾಕಿಸ್ತಾನಿ ಸೈನಿಕರು ಸ್ಥಳೀಯ ದಂಗೆಕೋರರ ವೇಷ ಧರಿಸಿ ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಮೂಲಕ ಭಾರತೀಯ ಪ್ರದೇಶಕ್ಕೆ ನುಸುಳಿದ್ದರು. 'ಆಪರೇಷನ್‌ ಜಿಬ್ರಾಲ್ಟರ್‌' ಎನ್ನುವ ರಹಸ್ಯ ಕಾರ್ಯಾಚರಣೆ ನಡೆಸಿ ಸ್ಥಳೀಯವಾಗಿ ನಡೆಯುತ್ತಿದ್ದ ದಂಗೆಗಳನ್ನು ಪ್ರಚೋದಿಸುತ್ತಿದ್ದರು. ಇದಕ್ಕೆ ಭಾರತ ಮಿಲಿಟರಿ ದಾಳಿಯ ಮೂಲಕ ಪ್ರತಿಕ್ರಿಯಿಸಿತ್ತು. ಪರಿಣಾಮ ಅಂತರರಾಷ್ಟ್ರೀಯ ಗಡಿಯಲ್ಲಿ ಯುದ್ಧ ಉಲ್ಬಣಗೊಂಡಿತ್ತು. 1965 ಸೆ.23ರವರೆಗ ಇದು ಮುಂದುವರಿದಿತ್ತು. ಬಳಿಕ ಸೋವಿಯತ್ ಒಕ್ಕೂಟ, ಮತ್ತು ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಉಭಯ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದವು.

1971 (ಬಾಂಗ್ಲಾದೇಶ ಲಿಬರೇಶನ್‌ ಯುದ್ಧ): 1971ರಲ್ಲಿ ಭಾರತ -ಪಾಕಿಸ್ತಾನ ಯುದ್ಧ ಪೂರ್ವ ಪಾಕಿಸ್ತಾನ(ಈಗಿನ ಬಾಂಗ್ಲಾದೇಶ)ದಲ್ಲಿ ಸ್ವಾತಂತ್ರ್ಯಕ್ಕೆ ಪ್ರಚೋದಿಸಿತ್ತು. ಬಾಂಗ್ಲಾದೇಶಕ್ಕೆ ಬೆಂಬಲಿಸುವ ಸಲುವಾಗಿ ಭಾರತಕ್ಕೆ ಯುದ್ಧಕ್ಕೆ ಪ್ರವೇಶಿಸಿತು. ಪೂರ್ವ ಮತ್ತು ಪಶ್ಚಿಮ, ಎರಡೂ ಕಡೆಗಳ ತೀವ್ರ ಹೋರಾಟದ ಬಳಿಕ ಪಾಕಿಸ್ತಾನ ಪಡೆ ಶರಣಾಗಿತ್ತು. ಪರಿಣಾಮ ಬಾಂಗ್ಲಾದೇಶ ರೂಪುಗೊಂಡು ಪ್ರತ್ಯೇಕ ಸ್ವತಂತ್ರ ರಾಷ್ಟ್ರವಾಯಿತು.

1999 (ಕಾರ್ಗಿಲ್‌ ಯುದ್ಧ): ಜಮ್ಮು ಕಾಶ್ಮೀರದ ಕಾರ್ಗಿಲ್‌ ಪ್ರದೇಶವನ್ನು ಪಾಕಿಸ್ತಾನ ಸೇನೆ ಮತ್ತು ಉಗ್ರರು ಆಕ್ರಮಿಸಿಕೊಂಡಾಗ 1999ರಲ್ಲಿ ಮೇ ಮತ್ತು ಜುಲೈ ತಿಂಗಳ ನಡುವೆ ಭಾರತ ಮತ್ತು ಪಾಕಿಸ್ತಾನ ನಡುವೆ ಕಾರ್ಗಿಲ್‌ ಯುದ್ಧ ನಡೆಯಿತು. ಇದಕ್ಕೆ ಭಾರತ 'ಆಪರೇಷನ್‌ ವಿಜಯ್‌' ಎಂದು ಹೆಸರಿಟ್ಟಿತ್ತು, ವಾಯುಪಡೆಯ 'ಆಪರೇಷನ್ ಸಫೇದ್ ಸಾಗರ್' ಬೆಂಬಲದೊಂದಿಗೆ 1999ರ ಜುಲೈ 26 ರಂದು ಭಾರತವು ನಿಯಂತ್ರಣವನ್ನು ಮರಳಿ ಪಡೆದುಕೊಂಡಿತು. ಯುದ್ಧವೂ ಕೊನೆಗೊಂಡಿತು, ಆ ದಿನವನ್ನು ಈಗ 'ಕಾರ್ಗಿಲ್ ವಿಜಯ್ ದಿವಸ್' ಎಂದು ಆಚರಿಸಲಾಗುತ್ತದೆ.

2016 (ಉರಿ ದಾಳಿ): ಜಮ್ಮು ಮತ್ತು ಕಾಶ್ಮೀರದ ಉರಿ ಪ್ರದೇಶದಲ್ಲಿನ ಭಾರತೀಯ ಸೇನಾ ಶಿಬಿರದ ಮೇಲೆ 2016ರ ಸೆ.18ರಂದು ಉಗ್ರರು ದಾಳಿ ನಡೆಸಿ 19 ಮಂದಿ ಯೋಧರನ್ನು ಬಲಿಪಡೆದಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಸೆ. 28, 29ರಂದು ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿತ್ತು. ಪರಿಣಾಮ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಹಲವು ಉಗ್ರರು ಮೃತಪಟ್ಟಿದ್ದರು.

2019 (ಪುಲ್ವಾಮಾ ದಾಳಿ): 2019ರ ಫೆ.14 ರಂದು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ದಾಳಿ ನಡೆಸಿದಾಗ 40 ಸಿಆರ್‌ಪಿಎಫ್‌ ಸಿಬ್ಬಂದಿ ಮೃತರಾಗಿದ್ದರು. ಇದಕ್ಕೆ ಪ್ರತಿಯಾಗಿ ಫೆ.26 ರಂದು ಭಾರತೀಯ ವಾಯುಸೇನೆ ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಜೈಶ್‌-ಎ- ಮೊಹಮ್ಮದ್‌ ಉಗ್ರ ಸಂಘಟನೆಯ ಶಿಬಿರದ ಮೇಲೆ ಏರ್‌ಸ್ಟ್ರೈಕ್‌ ನಡೆಸಿ ಪ್ರತೀಕಾರ ತೀರಿಸಿಕೊಂಡಿತ್ತು. 1971ರ ಬಳಿಕ ನಡೆದ ಏರ್‌ಸ್ಟ್ರೈಕ್‌ ಇದಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries