HEALTH TIPS

ಗೋಧ್ರಾ ಪ್ರಕರಣದಲ್ಲಿ ಶಿಕ್ಷೆಯ ವಿರುದ್ಧ ಸಲ್ಲಿಸಿದ ಅರ್ಜಿಯನ್ನು ಪ್ರಶ್ನಿಸಿದ ಸುಪ್ರೀಂಕೋರ್ಟ್

ನವದೆಹಲಿ: ಗೋಧ್ರಾ ರೈಲು ದಹನ ಘಟನೆ ನಡೆದಾಗ ತಾನು ಸ್ಥಳದಲ್ಲಿರಲಿಲ್ಲ ಎಂಬ ಪ್ರಕರಣದ ಅಪರಾಧಿ ಅಬ್ದುಲ್ ರಹಮಾನ್ ಧಾಂತಿಯಾ ವಾದವನ್ನು ಸರ್ವೋಚ್ಚ ನ್ಯಾಯಾಲಯವು ಪ್ರಶ್ನಿಸಿದೆ. 2002,ಫೆ.27ರಂದು ಗುಜರಾತಿನ ಗೋಧ್ರಾ ರೈಲು ನಿಲ್ದಾಣದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್‌ನ ಎಸ್-6 ಬೋಗಿಗೆ ಬೆಂಕಿ ಹಚ್ಚಿದ ಪರಿಣಾಮ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 59 ಜನರು ಮೃತಪಟ್ಟಿದ್ದರು.

ಮಂಗಳವಾರ ನಡೆದ ವಿಚಾರಣೆ ಸಂದರ್ಭ ನ್ಯಾಯಮೂರ್ತಿಗಳಾದ ಜೆ.ಕೆ.ಮಹೇಶ್ವರಿ ಮತ್ತು ಅರವಿಂದ ಕುಮಾರ ಅವರ ಪೀಠವು, ಸಾಕ್ಷಿಗಳ ಹೇಳಿಕೆಗಳು ರೈಲಿನ ಮೇಲೆ ಕಲ್ಲುತೂರಾಟ ನಡೆಸಿ ಭಾರತ ವಿರೋಧಿ ಘೋಷಣೆಗಳಲ್ಲಿ ಕೂಗಿದ್ದ ಗುಂಪಿನಲ್ಲಿ ಧಾಂತಿಯಾ ಉಪಸ್ಥಿತಿಯನ್ನು ಬೆಟ್ಟು ಮಾಡಿವೆ ಮತ್ತು ಈ ಸಾಕ್ಷ್ಯವು ದೋಷಾರೋಪಣೆಗೆ ಗುರಿಯಾಗದೆ ಉಳಿದಿದೆ ಎಂದು ಗೋದ್ರಾ ನಗರ ಪಾಲಿಕೆಯ ಮಾಜಿ ಸದಸ್ಯ ಧಾಂತಿಯಾ ಅಲಿಯಾಸ್ ಕಂಕಟ್ಟೊ ಅಲಿಯಾಸ್ ಜಂಬುರೊ ಪರ ಹಿರಿಯ ವಕೀಲ ಸಂಜಯ ಹೆಗ್ಡೆಯವರಿಗೆ ತಿಳಿಸಿತು. ಅಲ್ಲದೆ ಕನಿಷ್ಠ ಐವರು ಸಾಕ್ಷಿಗಳು ಸಹ ನ್ಯಾಯಾಲಯದಲ್ಲಿ ಧಾಂತಿಯಾನನ್ನು ಗುರುತಿಸಿದ್ದಾರೆ ಎಂದು ಪೀಠವು ಹೇಳಿತು.

ಧಾಂತಿಯಾನ ದೋಷನಿರ್ಣಯವನ್ನು ಎತ್ತಿ ಹಿಡಿದಿದ್ದ ಗುಜರಾತ್ ಉಚ್ಚ ನ್ಯಾಯಾಲಯದ 2017ರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳ ವಿಚಾರಣೆಯನ್ನು ಪೀಠವು ಕೈಗೆತ್ತಿಕೊಂಡಿದೆ.

ತಾನು 50 ಪ್ರತ್ಯಕ್ಷದರ್ಶಿಗಳನ್ನು ಪಾಟೀಸವಾಲಿಗೆ ಒಳಪಡಿಸಿದ್ದಾಗಿ ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿತು. ಈ ಎಲ್ಲ 50 ಜನರು ಅದೇ ರೈಲಿನ ಪ್ರಯಾಣಿಕರಾಗಿದ್ದರು.

ರೈಲಿಗೆ ಬೆಂಕಿ ಹಚ್ಚಿದ್ದ ಸಮಯದಲ್ಲಿ ಧಾಂತಿಯಾ ಗೋಧ್ರಾ ನಿಲ್ದಾಣದಿಂದ ತುಸು ದೂರದಲ್ಲಿರುವ ತನ್ನ ಮನೆಯಲ್ಲಿದ್ದ ಎಂದು ಹೆಗ್ಡೆ ನ್ಯಾಯಾಲಯಕ್ಕೆ ತಿಳಿಸಿದರು.

ಪೋಲಿಸ್ ವಾಹನದ ಚಾಲಕನ ಸಾಕ್ಷ್ಯವನ್ನು ಆಧರಿಸಿ ಹೆಗ್ಡೆ, ಸಾಕ್ಷಿಯ ಹೇಳಿಕೆಯನ್ನು ಎರಡು ಬಾರಿ ದಾಖಲಿಸಿಕೊಳ್ಳಲಾಗಿತ್ತು ಮತ್ತು ಒಂದು ಸಲವೂ ಅವರು ಧಾಂತಿಯಾನ ಹೆಸರನ್ನು ಉಲ್ಲೇಖಿಸಿರಲಿಲ್ಲ ಎಂದು ವಾದಿಸಿದರು.

ಸಾಕ್ಷಿಗಳು ನ್ಯಾಯಾಲಯದಲ್ಲಿ ಧಾಂತಿಯಾನನ್ನು ಗುರುತಿಸಿದ್ದು ಹೇಗೆ ಎಂದು ಪೀಠವು ಪ್ರಶ್ನಿಸಿದಾಗ ಹೆಗ್ಡೆ,ಧಾಂತಿಯಾ ಎಲ್ಲರಿಗೂ ತಿಳಿದಿರುವ ವ್ಯಕ್ತಿ,ಆ ಪ್ರದೇಶದ ಮುನ್ಸಿಪಲ್ ಸದಸ್ಯ ಎಂದು ಉತ್ತರಿಸಿದರು.

ಪಾಟೀ ಸವಾಲಿನ ಸಂದರ್ಭದಲ್ಲಿ ಇದನ್ನೇಕೆ ಸಾಕ್ಷಿಗೆ ಪ್ರಶ್ನಿಸಿರಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ ಪೀಠವು,ದೋಷಿಯು ಪಾಟೀ ಸವಾಲಿನ ಹಂತದಲ್ಲಿ ಪ್ರಶ್ನೆಯನ್ನೆತ್ತದೆ ಈಗ ಇಂತಹ ಪ್ರತಿವಾದವನ್ನು ಮಂಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.

ಧಾಂತಿಯಾ ತನ್ನ ಬಾವಿಯಿಂದ ಅಗ್ನಿಶಾಮಕ ದಳದ ಟ್ಯಾಂಕರ್‌ಗೆ ನೀರನ್ನು ಒದಗಿಸಿದ್ದ ಎಂಬ ಸಾಕ್ಷಿಯ ಹೇಳಿಕೆಯನ್ನು ಉಲ್ಲೇಖಿಸಿದ ಹೆಗ್ಡೆ, ತನ್ನ ಕಕ್ಷಿದಾರ ರೈಲಿಗೆ ನೆರವನ್ನು ನಿಲ್ಲಿಸಲು ಅಥವಾ ಜನರನ್ನು ಪ್ರಚೋದಿಸಲು ಪ್ರಯತ್ನಿಸಿರಲಿಲ್ಲ,ಆತ ಪರಿಹಾರ ಕಾರ್ಯಾಚರಣೆಗೆ ನೆರವಾಗಿದ್ದನಷ್ಟೆ ಎಂದು ವಾದಿಸಿದರು.

ಆದರೆ,ಧಾಂತಿಯಾ ಸ್ಥಳದಲ್ಲಿ ಉಪಸ್ಥಿತನಿದ್ದ,ಕಲ್ಲುತೂರಾಟ ನಡೆಸಿದ್ದ ಮತ್ತು ಗುಂಪನ್ನು ಪ್ರಚೋದಿಸಿದ್ದ ಎನ್ನುವುದು ಪ್ರಾಸಿಕ್ಯೂಷನ್ ಆರೋಪಗಳಾಗಿವೆ.

ನಿಮ್ಮ ಕಕ್ಷಿದಾರ ಅಗ್ನಿಶಾಮಕ ದಳಕ್ಕೆ ನೀರು ಒದಗಿಸಿ ನೆರವಾಗಿದ್ದರಿಂದ ಆತ ಅಪರಾಧವನ್ನು ಮಾಡಿದ್ದರೆ ಅದನ್ನು ಕೈಬಿಡಬೇಕು ಎಂದು ಹೇಳಲು ನೀವು ಬಯಸಿದ್ದೀರಾ ಎಂದು ಪ್ರಶ್ನಿಸಿದ ನ್ಯಾ.ಕುಮಾರ,ಆ ಸಾಕ್ಷ್ಯಾಧಾರವು ದೋಷಾರೋಪಣೆಗೆ ಒಳಗಾಗದೆ ಉಳಿದುಕೊಂಡಿದೆ ಎಂದು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries