ಅವಂತಿಪುರ: ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ಬಳಿಕ ದಕ್ಷಿಣ ಕಾಶ್ಮೀರದ ವಿವಿಧೆಡೆ ಉಗ್ರರ ನಿಗ್ರಹ ಕಾರ್ಯಾಚರಣೆ ತೀವ್ರಗೊಳಿಸಿರುವ ಸೇನಾ ಪಡೆಗಳು, ಮೂರು ದಿನಗಳಲ್ಲಿ 6 ಮಂದಿ ಭಯೋತ್ಪಾದಕರನ್ನು ಹತ್ಯೆ ಮಾಡಿವೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಕಾಶ್ಮೀರದ ಐಜಿಪಿ ವಿ.ಕೆ. ಬಿರ್ದಿ, 'ಕಳೆದೊಂದು ತಿಂಗಳಿನಿಂದ ಭಯೋತ್ಪಾದಕರ ಚಟುವಟಿಕೆಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ.
ಅಲ್ಲದೆ, ಪರಿಸ್ಥಿತಿಗೆ ಅನುಗುಣವಾಗಿ ಭದ್ರತಾ ತಂಡಗಳ ಕಾರ್ಯ ತಂತ್ರಗಳಲ್ಲಿ ಬದಲಾವಣೆ ಮಾಡಲಾಗಿದೆ' ಎಂದರು.
ಭದ್ರತಾ ಪಡೆಗಳ ನಡುವಿನ ಸಹಕಾರದಿಂದಾಗಿ ಮೂರು ದಿನಗಳಲ್ಲಿ ನಡೆದ ಎರಡು ಯಶಸ್ವಿ ಕಾರ್ಯಾಚರಣೆಯಲ್ಲಿ ಆರು ಮಂದಿ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಇದು ಮಹತ್ವದ ಸಾಧನೆ ಎಂದು ತಿಳಿಸಿದರು.
ಮಂಗಳವಾರ ಮತ್ತು ಗುರುವಾರ ಶೋಪಿಯಾನ್‌ನ ಕೆಲ್ಲೆರ್ ಮತ್ತು ಪುಲ್ವಾಮದ ಟ್ರಾಲ್‌ನ ನಾಡರ್ ಪ್ರದೇಶದಲ್ಲಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ತಲಾ ಮೂವರು ಭಯೋತ್ಪಾದಕರು ಹತ್ಯೆಗೀಡಾಗಿದ್ದಾರೆ.




