ನವದೆಹಲಿ: ನಿವೃತ್ತರಾಗಿರುವ ನ್ಯಾಯಮೂರ್ತಿ ಬೇಲಾ ಎಂ.ತ್ರಿವೇದಿ ಅವರಿಗಾಗಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳದಿರುವ ಸುಪ್ರೀಂ ಕೋರ್ಟ್ ವಕೀಲರ ಸಂಘದ (ಎಸ್‌ಸಿಬಿಎ) ನಡೆಯನ್ನು ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ಶುಕ್ರವಾರ ಖಂಡಿಸಿದರು. 'ನಾನು ಸರಳವಾಗಿ ಹೇಳಲು ಬಯಸುತ್ತೇನೆ.
ಎಸ್‌ಸಿಬಿಎ ಇಂತಹ ನಿರ್ಧಾರವನ್ನು ಕೈಗೊಳ್ಳಬಾರದಿತ್ತು. ಇದನ್ನು ನಾನು ಬಹಿರಂಗವಾಗಿಯೇ ಖಂಡಿಸುತ್ತೇನೆ' ಎಂದು ಹೇಳಿದ್ದಾರೆ.
ನ್ಯಾಯಮೂರ್ತಿ ಬೇಲಾ ಎಂ.ತ್ರಿವೇದಿ ಅವರನ್ನು ಬೀಳ್ಕೊಡಲು ಹಮ್ಮಿಕೊಂಡಿದ್ದ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಿಜೆಐ ಗವಾಯಿ ನೇತೃತ್ವದ ನ್ಯಾಯಪೀಠದ ವತಿಯಿಂದ ಹಮ್ಮಿಕೊಂಡಿದ್ದ ಈ ಸಮಾರಂಭದಲ್ಲಿ ಪೀಠದ ಮತ್ತೊಬ್ಬ ಸದಸ್ಯ ಆಗಸ್ಟಿನ್ ಜಾರ್ಜ್ ಮಸೀಹ್ ಕೂಡ ಇದ್ದರು.
'ಸಾಮಾನ್ಯವಾಗಿ ವಕೀಲರ ಸಂಘ ಬೀಳ್ಕೊಡುವ ಸಮಾರಂಭ ಹಮ್ಮಿಕೊಳ್ಳುತ್ತದೆ. ನ್ಯಾಯಮೂರ್ತಿ ತ್ರಿವೇದಿ ಅವರಿಗಾಗಿ ಇಂತಹ ಸಮಾರಂಭವನ್ನು ಸಂಘ ಹಮ್ಮಿಕೊಳ್ಳದೇ ಇದ್ದರೂ, ಸಂಘದ ಅಧ್ಯಕ್ಷ ಹಾಗೂ ಹಿರಿಯ ವಕೀಲ ಕಪಿಲ್ ಸಿಬಲ್, ಉಪಾಧ್ಯಕ್ಷೆ ರಚನಾ ಶ್ರೀವಾಸ್ತವ ಪಾಲ್ಗೊಂಡಿರುವುದು ಶ್ಲಾಘನೀಯ' ಎಂದು ಸಿಜೆಐ ಹೇಳಿದರು.
ನ್ಯಾಯಮೂರ್ತಿ ಮಸೀಹ್ ಕೂಡ ಸಂಘದ ನಡೆಯನ್ನು ಖಂಡಿಸಿದರು. 'ಸಿಜೆಐ ಹೇಳಿದಂತೆ, ಸಂಪ್ರದಾಯಗಳನ್ನು ಗೌರವಿಸುವ ಜೊತೆಗೆ, ಅವುಗಳನ್ನು ಮುಂದುವರಿಸಿಕೊಂಡು ಹೋಗಬೇಕು' ಎಂದರು.
'ಪರಿಶ್ರಮಿ': ನ್ಯಾಯಮೂರ್ತಿ ತ್ರಿವೇದಿ ಅವರ ಕಾರ್ಯವೈಖರಿ ಹೊಗಳಿದ ಸಿಜೆಐ ಗವಾಯಿ, 'ಜಿಲ್ಲಾ ನ್ಯಾಯಾಲಯದಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿವರೆಗಿನ ತ್ರಿವೇದಿ ಅವರ ಪಯಣ ಎಲ್ಲರಿಗೂ ಮಾದರಿ' ಎಂದರು.
'ನ್ಯಾಯಪರತೆ, ಕಠಿಣ ಪರಿಶ್ರಮ, ದೃಢ ನಿಲುವುಗಳನ್ನು ತೆಗೆದುಕೊಳ್ಳುವುದು, ನಿಷ್ಠೆ ಹಾಗೂ ಸಮಗ್ರತೆಯಿಂದಲೇ ನ್ಯಾಯಮೂರ್ತಿ ತ್ರಿವೇದಿ ಅವರನ್ನು ಎಲ್ಲರೂ ಗುರುತಿಸುತ್ತಾರೆ' ಎಂದರು.
ನ್ಯಾಯಮೂರ್ತಿ ತ್ರಿವೇದಿ ಅವರು 2021ರ ಆಗಸ್ಟ್ 31ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಹೊಂದಿದರು.
ಅವರು ಜೂನ್ 9ರಂದು ನಿವೃತ್ತರಾಗಬೇಕಿತ್ತು. ವೈಯಕ್ತಿಕ ಕಾರಣಗಳನ್ನು ನೀಡಿ ಅವರು ಶುಕ್ರವಾರವೇ ನಿವೃತ್ತರಾಗಿದ್ದಾರೆ.




