ನವದೆಹಲಿ: ಸಂಘರ್ಷದಲ್ಲಿ ಪಾಕಿಸ್ತಾನದ 35-40 ಸಿಬ್ಬಂದಿ ಹತರಾಗಿದ್ದಾರೆ. ಇದೇ ವೇಳೆ ಭಾರತೀಯ ಸೇನೆಯ ಐವರು ಯೋಧರು ಹುತಾತ್ಮರಾಗಿದ್ದಾರೆ ಎಂದು ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕ (ಡಿಜಿಎಂಒ) ಲೆಫ್ಟಿನಂಟ್ ಜನರಲ್ ರಾಜೀವ್ ಘಾಯ್ ತಿಳಿಸಿದ್ದಾರೆ.
ಕದನ ವಿರಾಮಕ್ಕೆ ಸಂಬಂಧಿಸಿದಂತೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 'ಹಲವು ಏಜೆನ್ಸಿಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ಪಾಕಿಸ್ತಾನ ಸೇನೆಯ 35-40 ಯೋಧರು ಗಡಿ ನಿಯಂತ್ರಣ ರೇಖೆಯ ಬಳಿ ಹತ್ಯೆಯಾಗಿದ್ದಾರೆ.
ಇನ್ನಷ್ಟು ಸಾವು ನೋವಿನ ಮಾಹಿತಿ ಕಲೆಹಾಕಲಾಗುತ್ತಿದೆ' ಎಂದು ಹೇಳಿದ್ದಾರೆ.
ಭಾರತಕ್ಕೆ ಜಯ ಲಭಿಸಿದೆ ಎಂಬು ಭಾವಿಸಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮೃತಪಟ್ಟವರಿಗೆ ನ್ಯಾಯ ಒದಗಿಸಲಾಗಿದೆ' ಎಂದು ಪ್ರತಿಪಾದಿಸಿದ್ದಾರೆ.
ಭಾರತದ ಸಾರ್ವಭೌಮತೆಗೆ ಎದುರಾಗುವ ಯಾವುದೇ ಬೆದರಿಕೆಯನ್ನು ನಿರ್ಣಾಯಕ ಬಲದೊಂದಿಗೆ ಹಿಮ್ಮೆಟ್ಟಿಸಲಾಗುವುದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.




