ನವದೆಹಲಿ: ಭಾರತವು ಜಪಾನ್ ಅನ್ನು ಹಿಂದಿಕ್ಕೆ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯ (economy) ದೇಶವಾಗಿದೆ ಎಂದು ನೀತಿ ಆಯೋಗ್ ಸಿಇಒ ಬಿ.ವಿ.ಆರ್. ಸುಬ್ರಹ್ಮಣ್ಯಂ ಹೇಳಿದ್ದಾರೆ. ಶನಿವಾರ ನಡೆದ ನೀತಿ ಆಯೋಗ್ನ 10ನೇ ಆಡಳಿತ ಮಂಡಳಿ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಸುಬ್ರಹ್ಮಣ್ಯಂ, ಒಟ್ಟಾರೆ ಆರ್ಥಿಕ ಮತ್ತು ಜಾಗತಿಕ ರಾಜಕೀಯ ವಾತಾರಣವು ಭಾರತಕ್ಕೆ ಅನುಕೂಲಕರವಾಗಿದೆ ಎಂದಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಐಎಂಎಫ್ನ ದತ್ತಾಂಶವನ್ನು ಉಲ್ಲೇಖಿಸಿದ ಅವರು, ಭಾರತ 4 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿರುವುದನ್ನು ಹೇಳಿದ್ದಾರೆ.
'ನಾನೀಗ ಮಾತನಾಡುತ್ತಿರುವಂತೆಯೇ ನಾಲ್ಕು ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವೆನಿಸಿದ್ದೇವೆ. ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಎನಿಸಿದ್ದೇವೆ. ಅಮೆರಿಕ, ಚೀನಾ, ಜರ್ಮನಿ ಮಾತ್ರವೇ ಈಗ ಭಾರತಕ್ಕಿಂತ ದೊಡ್ಡ ಆರ್ಥಿಕತೆ ಹೊಂದಿವೆ. ಈಗ ನಾವಂದುಕೊಂಡ ರೀತಿಯಲ್ಲೇ ಸಾಗಿದಲ್ಲಿ ಎರಡೂವರೆ ಮೂರು ವರ್ಷದಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವೆನಿಸಲಿದ್ದೇವೆ' ಎಂದು ನೀತಿ ಆಯೋಗ್ ಸಿಇಒ ತಿಳಿಸಿದ್ದಾರೆ.
ಆಯಪಲ್ ಫೋನ್ ಭಾರತದಲ್ಲಿ ಕಡಿಮೆ ಬೆಲೆಗೆ ತಯಾರಿ: ಸುಬ್ರಹ್ಮಣ್ಯಂ
ಆಯಪಲ್ನ ಐಫೋನ್ ಅನ್ನು ಅಮೆರಿಕದಲ್ಲಿ ತಯಾರಿಸದೇ ಹೋದರೆ ಅದಕ್ಕೆ ಶೇ. 25ರಷ್ಟು ಟ್ಯಾರಿಫ್ ಹಾಕುವುದಾಗಿ ಡೊನಾಲ್ಡ್ ಟ್ರಂಪ್ ಹಾಕಿರುವ ಬೆದರಿಕೆಯನ್ನು ಭಾರತದ ನೀತಿ ಆಯೋಗ್ ಸಿಇಒ ತಳ್ಳಿಹಾಕಿದ್ದಾರೆ. 'ಟ್ಯಾರಿಫ್ ಕ್ರಮ ಇನ್ನೂ ಅನಿಶ್ಚಿತ ಎನಿಸಿದೆ. ಈಗಿರುವ ಅಂಶಗಳನ್ನು ಗಮನಿಸಿದರೆ ಐಫೋನ್ ತಯಾರಿಕೆಯ ವೆಚ್ಚ ಭಾರತದಲ್ಲಿ ಅಗ್ಗ ಎನಿಸುತ್ತದೆ' ಎಂದು ನೀತಿ ಆಯೋಗ್ ಸಿಇಒ ಹೇಳಿದ್ದಾರೆ.
ಅಮೆರಿಕ ಬಿಟ್ಟು ಭಾರತದಲ್ಲಾಗಲೀ ಅಥವಾ ಬೇರೆಲ್ಲಿಯಾಗಲೀ ತಯಾರಿಸುವ ಫೋನ್ಗಳ ಮೇಲೆ ಶೇ. 25ರಷ್ಟು ಟ್ಯಾರಿಫ್ ಹಾಕುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಯಪಲ್ ಹಾಗೂ ಸ್ಯಾಮ್ಸುಂಗ್ ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಕೆಲ ವರ್ಷಗಳ ಹಿಂದಿನವರೆಗೂ ಶೇ. 95 ಐಫೋನ್ಗಳನ್ನು ಚೀನಾದಲ್ಲಿ ತಯಾರಿಸುತ್ತಿದ್ದ ಆಯಪಲ್ ಕಂಪನಿ ಈಗ ಭಾರತದಲ್ಲಿ ತನ್ನ ತಯಾರಿಕೆ ಸೌಲಭ್ಯ ವಿಸ್ತರಿಸುತ್ತಾ ಬಂದಿದೆ. ಈಗ ಹೆಚ್ಚೂಕಡಿಮೆ ಶೇ. 20ರಷ್ಟು ಐಫೋನ್ಗಳು ಭಾರತದಲ್ಲಿ ಮ್ಯಾನುಫ್ಯಾಕ್ಚರ್ ಆಗುತ್ತಿವೆ. ಸ್ಯಾಮ್ಸುಂಗ್ ಕಂಪನಿಯೂ ಕೂಡ ಭಾರತದಲ್ಲಿ ತನ್ನ ಹಲವು ಫೋನ್ಗಳನ್ನು ತಯಾರಿಸುತ್ತಿವೆ. ಸ್ಮಾರ್ಟ್ಫೊನ್ ತಯಾರಿಕೆಯು ಭಾರತದಲ್ಲಿ ಬಹಳ ದೊಡ್ಡ ಉದ್ಯಮವಾಗಿ ಬೆಳೆದಿದೆ.




