ಬೀಜಿಂಗ್/ಮಾಸ್ಕೊ: ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಮೇ 7ರಿಂದ 10ರವರೆಗೆ ರಷ್ಯಾ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆಗೆ ಅಂತರರಾಷ್ಟ್ರೀಯ ಹಾಗೂ ಪ್ರಾದೇಶಿಕ ಪ್ರಮುಖ ವಿಚಾರಗಳ ಕುರಿತಂತೆ ಚರ್ಚೆ ನಡೆಸಲಿದ್ದಾರೆ.
ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಿದ ನಂತರ, ಜಿನ್‌ಪಿಂಗ್ ಅವರು ಮೊದಲ ಬಾರಿ ಮಾಸ್ಕೊಗೆ ಭೇಟಿ ನೀಡುತ್ತಿದ್ದಾರೆ. 2024ರ ಅಕ್ಟೋಬರ್‌ನಲ್ಲಿ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಈ ಹಿಂದೆ ರಷ್ಯಾಗೆ ಭೇಟಿ ನೀಡಿದ್ದರು.
'ಎರಡನೇ ಮಹಾಯುದ್ಧದಲ್ಲಿ ಜರ್ಮನಿ ವಿರುದ್ಧ ಸೋವಿಯತ್ ಸಾಧಿಸಿದ ಗೆಲುವಿನ 80ನೇ ವಾರ್ಷಿಕೋತ್ಸವದಲ್ಲಿ (ಮೇ 9) ಭಾಗವಹಿಸಲು ಜಿನ್‌ಪಿಂಗ್ ಅವರು ರಷ್ಯಾಗೆ ಅಧಿಕೃತ ಪ್ರವಾಸ ಕೈಗೊಳ್ಳಲಿದ್ದಾರೆ' ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಭಾನುವಾರ ಬೀಜಿಂಗ್‌ನಲ್ಲಿ ತಿಳಿಸಿದ್ದಾರೆ.
ಚೀನಾದ ಮೇಲೆ ಅಮೆರಿಕ ಸುಂಕ ಸಮರ ಆರಂಭಿಸಿರುವ ಬೆನ್ನಲ್ಲೇ ಈ ಭೇಟಿ ಮಹತ್ವ ಪಡೆದಿದೆ.




