ಬದಿಯಡ್ಕ: ವೈಯುಕ್ತಿಕ ಬದುಕಿನೊಂದಿಗೆ ಸಮಕಾಲೀನತೆಯೊಂದಿಗೆ ಸಾರ್ವಜನಿಕ ವಿಷಯಗಳನ್ನು ಜೋಡಿಸಿದಾಗ ಜೀವನ ಸುಖಮಯವಾಗುತ್ತದೆ. ನಮ್ಮ ಪುರಾಣ ಗ್ರಂಥಗಳು ಇಂತಹ ಸರಳ ಸುಸೂತ್ರ ಬದುಕಿನ ಮೌಲ್ಯಗಳನ್ನು ಬಿಂಬಿಸುವಲ್ಲಿ ಮಹತ್ತರವಡೆನಿಸಿವೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ, ಪ್ರಾಧ್ಯಾಪಕ ಡಾ.ಎ.ಎಂ.ಶ್ರೀಧರನ್ ತಿಳಿಸಿದರು.
ಮಾನ್ಯ ಸಮೀಪದ ಕೊಲ್ಲಂಗಾನದ ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥರ ಅನಂತಶ್ರೀಯ ಭಾನುವಾರ ನಡೆದ 8ನೇ ವಾರ್ಷಿಕೋತ್ಸವದ ಅಂಗವಾಗಿ ಅಪರಾಹ್ನ ನಡೆದ ಸಭಾ ಕಾರ್ಯಕ್ರಮ-ಸನ್ಮಾನ ಸಮಾರಂಭವನ್ನು ಔಪಚಾರಿಕವಾಗಿ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡದ ಮಹಾನ್ ಕವಿ ಕುವೆಂಪು ಅವರ ರಾಮಾಯಣ ದರ್ಶನ ಪರಿಪೂರ್ಣ ಬದುಕಿನ ವ್ಯಕ್ತಿ ರೂಪವನ್ನು ಪ್ರತಿಬಿಂಬಿಸುತ್ತದೆ. ಶ್ರೀರಾಮಚಂದ್ರನನ್ನು ನಮ್ಮವರಲ್ಲೊಬ್ಬನಾಗಿ ಬದುಕಿನ ಸುಖ-ದುಖಃ, ಸರಳತೆ-ಸಂಕೀರ್ಣತೆ, ಆಡಳಿತ-ಕುಟುಂಬ ವ್ಯವಸ್ಥೆಗಳ ಪ್ರತಿಮಾ ರೂಪವಾಗಿ ಚಿತ್ರಿಸಲ್ಪಡುವ, ವ್ಯಕ್ತಿ ಯಶಸ್ವೀ ಶಕ್ತಿಯಾಗಿ ರೂಪುಗೊಳ್ಳುವ ಮನುಜ ಬದುಕಿನ ಸೂತ್ರವಾಗಿ ತಲತಲಾಂತರದಿಂದ ಭಾರತೀಯರ ಮನಸ್ಸಿನೊಳಗೆ ಅಚ್ಚೊತ್ತಿರುವ ಅದು 'ನಾನೇ' ಆಗುವ ತತ್ವವಾಗಿದೆ. ಪ್ರೊ.ಎ.ಶ್ರೀನಾಥ್ ಅನಂತಶ್ರೀಯ ಮೂಲಕ ಸಮಾಜಮುಖಿಯಾಗಿ ಶ್ರೀರಾಮನ ಆದರ್ಶಗಳನ್ನು ಮೈಗೂಡಿಸಿಕೊಂಡು ಸರ್ವಜನಪ್ರಿಯ ಮಾದರಿ ವ್ಯಕ್ತಿತ್ವದವರು ಎಂದರು.
ಬ್ರಹ್ಮಶ್ರೀ ಪದ್ಮನಾಭ ಬರ್ಲಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬದುಕಿನ ಸಾರ್ಥಕತೆಗೆ ಎಲ್ಲರೊಳಗೊಂದಾಗಿ ಬದುಕುವ ಕಲೆ ಸಾಧಿತವಾಗಬೇಕು. ವೈಯುಕ್ತಿಕ ಬದುಕಿನೊಂದಿಗೆ ಸಾಮಾಜಿಕ ಕಳಕಳಿ, ಸಾಹಿತ್ಯ, ಕಲೆಗಳಿಗೆ ನೀಡುವ ಬೆಂಬಲ ಜೀವನ ವಿಶಾಲತೆಯ ಸಂಕೇತ ಎಂದರು.
ಪ್ರಾಧ್ಯಾಪಕ ಪ್ರೊ. ಡಿ.ರಾಜೇಂದ್ರ ರೈ ದೇಲಂಪಾಡಿ ಶುಭಹಾರೈಸಿದರು. ಈ ಸಂದರ್ಭ ಹಿರಿಯ ವೈದ್ಯ, ಧಾರ್ಮಿಕ ಮುಂದಾಳು ಡಾ.ಅನಂತ ಕಾಮತ್ ಕಾಸರಗೋಡು, ಶೈಕ್ಷಣಿಕ, ಧಾರ್ಮಿಕ ಮುಂದಾಳು ಬಾಬು ಮಾಸ್ತರ್ ಅಗಲ್ಪಾಡಿ, ಕೇರಳ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಸಾಹಿತಿ ಕೆ.ವಿ.ಕುಮಾರನ್, ನಿವೃತ್ತ ವಾಯು ಸೇನಾ ಉದ್ಯೋಗಿ ತಿರುಮಲೇಶ್ವರ ಭಟ್ ಪಜ್ಜ, ಪದ್ಮಶ್ರೀ ಪುರಸ್ಕøತ ಸತ್ಯನಾರಾಯಣ ಬೆಳೇರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರೊ.ಎ.ಶ್ರೀನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರವಿ ನಾಯ್ಕಾಪು ನಿರೂಪಿಸಿದರು. ಬೆಳಿಗ್ಗೆ ಶ್ರೀಶಾಸ್ತಾ ಮಹಿಳಾ ಭಜನಾ ಸಂಘ ಮಾನ್ಯ ಇವರಿಂದ ಭಜನಾ ಸಂಕೀರ್ತನೆ ಹಾಗೂ ವೃಂದಾವನ ಬಾಲಗೋಕುಲ ಮಾನ್ಯ ತಂಡದವರಿಂದ ಕುಣಿತ ಭಜನೆ ನಡೆಯಿತು.




.jpg)
