ಕೀವ್: ರಷ್ಯಾ ಮತ್ತು ಉಕ್ರೇನ್ ಗುರುವಾರ ಪರಸ್ಪರನ ನೆಲೆ ಗುರಿಯಾಗಿಸಿ ಡ್ರೋನ್ ದಾಳಿ ನಡೆಸಿದ್ದು, ಒಟ್ಟು 9 ಮಂದಿ ಸತ್ತಿದ್ದಾರೆ. ಹಲವರು ಗಾಯಗೊಂಡಿದ್ದಾರೆ.
ಉಕ್ರೇನ್ ನಡೆಸಿದ ಡ್ರೋನ್ ದಾಳಿಯಲ್ಲಿ ಏಳು ಮಂದಿ ಸತ್ತಿದ್ದರೆ, ರಷ್ಯಾದ ಸೇನೆಯು ಉಕ್ರೇನ್‌ನ ಒಡೆಸಾ ಬಂದರು ನಗರ ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ಇಬ್ಬರು ಸತ್ತಿದ್ದು, 15 ಮಂದಿ ಗಾಯಗೊಂಡರು.
ಅಮೆರಿಕ ಮತ್ತು ಉಕ್ರೇನ್ ನಡುವೆ ಆರ್ಥಿಕ ಒಪ್ಪಂದ ಏರ್ಪಟ್ಟಿರುವ ಹಿಂದೆಯೇ ಈ ದಾಳಿ ನಡೆದಿರುವುದು ಗಮನಾರ್ಹವಾಗಿದೆ.
ಉಕ್ರೇನ್ ಸೇನೆಯು ರಷ್ಯಾ ಆಕ್ರಮಿಕ ಒಲೆಷ್ಕಿ ನಗರ ಗುರಿಯಾಗಿಸಿ ದಾಳಿ ನಡೆಸಿತು. ಏಳು ಮಂದಿ ಸತ್ತು, 20 ಮಂದಿ ಗಾಯಗೊಂಡರು ಎಂದು ರಷ್ಯಾದ ನೇಮಿಸಿರುವ ಗವರ್ನರ್ ವ್ಲಾಡಿಮಿರ್ ಸಾಲ್ಡೊ ತಿಳಿಸಿದರು.
'ರಷ್ಯಾ ನಡೆಸಿದ ಡ್ರೋನ್ ದಾಳಿಯಲ್ಲಿ ವಸತಿ ಸಂಕೀರ್ಣವು ಭಾಗಶಃ ತೀವ್ರ ಹಾನಿಗೊಂಡಿದೆ. ಮನೆ, ಸೂಪರ್‌ಮಾರ್ಕೆಟ್ ಹಾಗೂ ಶಾಲೆ ಕಟ್ಟಡಗಳಿಗೂ ಹಾನಿಯಾಗಿದೆ' ಎಂದು ಒಡೆಸಾ ಗವರ್ನರ್ ಒಲಿ ಕೀಪರ್ ತಿಳಿಸಿದ್ದಾರೆ.
ದಾಳಿಯ ಬಳಿಕ ಕಟ್ಟಡಗಳಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವ ವಿಡಿಯೊವನ್ನು ಅವರು ಟೆಲಿಗ್ರಾಂ ಚಾನೆಲ್‌ನಲ್ಲಿಯೂ ಹಂಚಿಕೊಂಡಿದ್ದಾರೆ.
'ಉಕ್ರೇನ್‌ನ ಎರಡನೇ ದೊಡ್ಡ ನಗರ ಹಾರ್ಕಿವ್‌ನ ಪೆಟ್ರೋಲ್ ಬಂಕ್ ಗುರಿಯಾಗಿಸಿ ದಾಳಿ ನಡೆದಿದೆ. ಹಾನಿ ಸಂಭವಿಸಿಲ್ಲ' ಎಂದು ಇಲ್ಲಿನ ಮೇಯರ್ ಇಹೊರ್ ತೆರೆಕೋವ್ ತಿಳಿಸಿದ್ದಾರೆ.
'ಉಕ್ರೇನ್‌ನ ಐದು ಪ್ರಾಂತ್ಯಗಳ ವಿವಿಧೆಡೆ ಮೇಲೆ ರಷ್ಯಾ ಗುರುವಾರ 170 ಡ್ರೋನ್‌ಗಳ ದಾಳಿ ನಡೆಸಿತ್ತು.ಈ ಪೈಕಿ 74ಅನ್ನು ಹೊಡೆದುರುಳಿಸಲಾಗಿದೆ' ಎಂದು ಉಕ್ರೇನ್‌ನ ಸೇನೆ ತಿಳಿಸಿದೆ.

