ವಾಷಿಂಗ್ಟನ್: ಭಯೋತ್ಪಾದನೆಯ ವಿರುದ್ಧದ ಹೋರಾಟ ಮತ್ತು ಭಾರತದ ಸ್ವರಕ್ಷಣೆಯ ಹಕ್ಕನ್ನು ಬೆಂಬಲಿಸುವುದಾಗಿ ಅಮೆರಿಕ ಗುರುವಾರ ಹೇಳಿದೆ.
ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್‌ಸೆತ್ ಅವರು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಕರೆ ಮಾಡಿ ಮಾತನಾಡಿದ್ದು, ಭಾರತಕ್ಕೆ ತಮ್ಮ ದೇಶದ ಬೆಂಬಲ ಸೂಚಿಸಿದ್ದಾರೆ.
'ಪಾಕಿಸ್ತಾನವು ಜಾಗತಿಕ ಭಯೋತ್ಪಾದನೆಯನ್ನು ಉತ್ತೇಜಿಸುವ 'ಪುಂಡ' ರಾಷ್ಟ್ರ ಎಂಬುದು ಬಯಲಾಗಿದ್ದು, ಇಡೀ ಪ್ರದೇಶವನ್ನು ಅಸ್ಥಿರಗೊಳಿಸುತ್ತಿದೆ. ಜಗತ್ತು ಇನ್ನು ಮುಂದೆ ಭಯೋತ್ಪಾದನೆಯನ್ನು ಕಾಣದಂತೆ ನಟಿಸಲು ಸಾಧ್ಯವಿಲ್ಲ' ಎಂದು ಸಂಭಾಷಣೆ ವೇಳೆ ರಾಜನಾಥ್ ಅವರು ಹೆಗ್‌ಸೆತ್‌ಗೆ ಹೇಳಿದ್ದಾರೆ.
'ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅಮೆರಿಕ ಸರ್ಕಾರದ ಬಲವಾದ ಬೆಂಬಲವನ್ನು ಹೆಗ್‌ಸೆತ್ ಅವರು ಪುನರುಚ್ಚರಿಸಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಅಮೆರಿಕವು ಭಾರತದ ಜತೆ ನಿಂತಿದ್ದು, ಸ್ವರಕ್ಷಣೆಗೆ ಭಾರತ ತೆಗೆದುಕೊಳ್ಳುವ ಕ್ರಮಗಳನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ' ಎಂದು ರಕ್ಷಣಾ ಸಚಿವರ ಕಚೇರಿಯ ಪ್ರಕಟಣೆ ತಿಳಿಸಿದೆ.
'ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ, ಹಣಕಾಸಿನ ನೆರವು ಮತ್ತು ಉಗ್ರರಿಗೆ ತರಬೇತಿ ನೀಡುವ ಸುದೀರ್ಘ ಇತಿಹಾಸವನ್ನು ಪಾಕಿಸ್ತಾನ ಹೊಂದಿದೆ. ಪಹಲ್ಗಾಮ್ ಘಟನೆಯನ್ನು ಜಾಗತಿಕ ಸಮುದಾಯವು ಖಂಡಿಸುವುದು ಅಗತ್ಯ' ಎಂದು ರಾಜನಾಥ ಅವರು ಹೆಗ್‌ಸೆತ್‌ಗೆ ತಿಳಿಸಿದ್ದಾರೆ.




